ಗದಗ: “ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡು ಸರ್ಕಾರವನ್ನ ಒಪ್ಪಿಸಿಕೊಂಡರೆ, ನಾನು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಐದೇ ನಿಮಿಷ ಮಾತು ನಡಸಿ ಅನುಮೋದನೆ ತರಿಸಬಹುದು” ಎಂಬ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿವಾದಾಸ್ಪದ ಹೇಳಿಕೆಗೆ ಗದಗ ಜಿಲ್ಲೆಯಲ್ಲಿ ಸಚಿವ ಹೆಚ್.ಕೆ. ಪಾಟೀಲ ತೀವ್ರ ತಿರುಗೇಟು ನೀಡಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ, ಕುಮಾರಸ್ವಾಮಿಯವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿ ಹೇಳಿದರು:
“ಅದನ್ನ ಒಪ್ಪಿಸೋಕೆ ನೀವ್ಯಾರು? ನಿಮಗೆ ಅವರ ಒಪ್ಪಿಗೆ ಬೇಕಾ? ನೀವು ಆದೇಶ ಮಾಡ್ತೀರಾ ಡಿಎಂಕೆಗೆ? ಎಲ್ಲದಕ್ಕೂ ಒಪ್ಪಿಗೆ ತಗೊಳ್ತೀರಾ? ಮಿತ್ರಪಕ್ಷಕ್ಕೆ ಒತ್ತಾಯಿಸಿ ಅಂತಾ ಹೇಳ್ತೀರೇನು, ಆದರೆ ನೀವು ಮಿತ್ರಪಕ್ಷದ ಒಪ್ಪಿಗೆ ಪಡೆದು ಎಲ್ಲವೂ ಮಾಡ್ತೀರಿ ಎಂಬುದನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಿ.”ಎಂದು ಪ್ರತಿಕ್ರಿಯಿಸಿದರು.
ಮುಂದುವರೆದು ಮಾತನಾಡಿದ ಅವರು, “ಅಂತರ್ ರಾಜ್ಯ ಜಲ ಕಾಯ್ದೆ ಪ್ರಕಾರ, ಈಗಿನ ಅನೇಕ ನಿರ್ಧಾರಾತ್ಮಕ ಕಾನೂನನ್ನು ನಿಮ್ಮ ಕೈಯಲ್ಲಿ ಪಾಸ್ ಮಾಡಿ ಕೊಟ್ಟಿದ್ದೇವೆ. ಆ ಕಾಯ್ದೆಯಲ್ಲಿ ತಮಿಳುನಾಡಿನ ಅಥವಾ ಇತರ ರಾಜ್ಯಗಳ ಒಪ್ಪಿಗೆ ತರೋ ವಿಚಾರ ಎಲ್ಲಿ ಇದೆ ನೋಡಿ. ಅದು ಕಾನೂನಿಗೆ ವಿರುದ್ಧ.” ಎಂದು ತಿರುಗೇಟು ನೀಡಿದರು.
ಸಚಿವರು ತಮಿಳುನಾಡಿನ ಉದಾಹರಣೆಯ ಪಾಠವನ್ನ ಸೀಮಿತಗೊಳಿಸದೆ, ಗೋವಾ ಸರ್ಕಾರದ ಕುರಿತಾಗಿಯೂ ತೀಕ್ಷ್ಣ ಪ್ರಶ್ನೆ ಎಸೆದು ಹೇಳಿದರು:
“ಹೀಗಾದರೆ ಮಹಾದಾಯಿ ವಿಚಾರದಲ್ಲಿ ನಿಮಗೆ ಏನು ತೊಂದರೆ? ಗೋವಾದಲ್ಲಿ ನಿಮ್ಮದೇ ಪಕ್ಷದ ಸರ್ಕಾರ ಇದೆ. ಅದು ನಿಮ್ಮ ಮಿತ್ರಪಕ್ಷದ ಸರ್ಕಾರ. ಹೀಗಿರುವಾಗ ಮಹಾದಾಯಿ ಯೋಜನೆಗೆ ಪರವಾನಗಿ ತರುತ್ತೀರಾ? ಅಥವಾ ಅವರ ಒಪ್ಪಿಗೆ ತಂದುಕೊಡಿ.”ಎಂದು ಪ್ರಶ್ನಿಸಿದರು.
ಇನ್ನು, ಬಿಜೆಪಿಯ ನಿರ್ಲಕ್ಷ್ಯತೆಯನ್ನೂ ಸಹ ಟೀಕಿಸಿದ ಸಚಿವರು,“ಮಹಾದಾಯಿ ಕುರಿತು ಯಡಿಯೂರಪ್ಪ ಪತ್ರ ತೋರಿಸಿದರು, ಪ್ರಹ್ಲಾದ್ ಜೋಶಿ ಹಲವಾರು ಪತ್ರಿಕಾ ಪರಿಷತ್ತು ನಡೆಸಿದರು, ಅಮಿತ್ ಷಾ ಸಹ ಬಂದು ಹಾರೈಸಿದರು. ಆದರೆ, ಪರಿಣಾಮ ಏನು? ಎಲ್ಲವೂ ಕೇವಲ ಲಿಪ್ಸರ್ಹ ಭರವಸೆಗಷ್ಟೇ ಸೀಮಿತವಾಯಿತು” ಎಂದು ಕಿಡಿಕಾರಿದರು.
“ಗೋವಾದಲ್ಲೂ ನಿಮ್ದೇ ಮಿತ್ರಪಕ್ಷದ ಸರ್ಕಾರ ಇದೆ. ಹಾಗಿದ್ದಾಗ ಮೋದಿಯವರು ಹೋಗಿ ಅವರ ಒಪ್ಪಿಗೆ ತರಲಿ ಎಂದು ನಾನು ಹೇಳಬೇಕಾಗಿಲ್ಲ.ಕುಮಾರಸ್ವಾಮಿ ಅವರೇ ಗೋವಾ ಸಿಎಂ ಒಪ್ಪಿಗೆ ತನ್ನಿ ಅಂತಾನೂ ನಾ ಹೇಳಲ್ಲ. ಏಕೆಂದರೆ ಅಂಥ ಒಪ್ಪಿಗೆ ಅವಶ್ಯವಿಲ್ಲ. ಆದರೆ ತಮಿಳುನಾಡಿನ ಒಪ್ಪಿಗೆ ತಂದುಕೊಡಿ. ಅನುಮೋದನೆ ಕೊಡಿಸುವ ಶಕ್ತಿ ಇದೆ ನಿಮಗೆ ಎಂದಾದರೆ, ಅದೇ ಶಕ್ತಿಯನ್ನು ಮಹಾದಾಯಿ ಕುರಿತು ಪ್ರಯೋಗಿಸಿ ಎಂದು ಕುಮಾರಸ್ವಾಮಿಗೆ ತಿರುಗೇಟು ನಿಡಿದರು.