ಗದಗ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ದಿನದ ಅಂಗವಾಗಿ ವಿಕಲಚೇತನ ಮಕ್ಕಳಿಗೆ ಕ್ರೀಟಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಷ್ಟೇ ಖುಷಿಯಿಂದಲೇ ವಿಕಲಾಂಗ ಚೇತನ ಮಕ್ಕಳು ಸ್ಪರ್ಧೆಯಲ್ಲಿ ಭಾಗಿಯಾಗಲು ಉತ್ಸುಕತೆಯಿಂದ ಬಂದಿದ್ರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿಕಲಾಂಗ ಚೇತನ ಮಕ್ಕಳು ತಮ್ಮ ಉತ್ಸಾಹವನ್ನೇ ಕಳೆದುಕೊಂಡಿದ್ರು. ಇತ್ತ ವಿದ್ಯುತ್ ಸಂಪರ್ಕ ಸಹ ಇಲ್ಲದೇ, ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಸಪ್ಪೆಯಾಯ್ತು.
ಹೌದು, ಈ ಎಲ್ಲಾ ಘಟನೆಗಳು ನಡೆದಿದ್ದು, ಗದಗ ನಗರದಲ್ಲಿ. ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ, ವಿಶ್ವ ವಿಕಲ ಚೇತನ ದಿನಾಚರಣೆ ಅಂಗವಾಗಿ, ವಿಕಲ ಚೇತನರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ನೂರಾರು ವಿಕಲ ಚೇತನ ಮಕ್ಕಳು ಆಗಮಿಸಿದ್ರು.
ಮುಗ್ಧ ಮನಸ್ಸಿನ ಮಕ್ಕಳು, ಶ್ರೀ ಕೃಷ್ಣ, ನಾರಾಯಣ, ಹನುಮಂತ ವೇಷ ಭೂಷಣ ಧರಿಸಿ ಬಂದಿದ್ರು. ಇನ್ನು ಕೆಲವು ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರಾದ ವೇಷವನ್ನು ಧರಿಸಿ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಸಜ್ಜಾಗಿ ಬಂದಿದ್ರು. ಆದರೆ ಸರಿಯಾದ ಧ್ವನಿವರ್ಧಕ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ ಇಲ್ಲದೇ, ಕಾರ್ಯಕ್ರಮ ಆಯೋಜಕರ ಅವ್ಯವಸ್ಥೆ ಪ್ರದರ್ಶನವಾಗಿತ್ತು.
ಇದಷ್ಟೇ ಅಲ್ಲದೇ, ವಿಕಲಚೇತನ ಮಕ್ಕಳಿಗೆ ಊಟವನ್ನು ಸರಿಯಾದ ಸಮಯಕ್ಕೆ ನೀಡದೇ ಇರೋದಕ್ಕೆ ವಿಕಲಾಂಗಚೇತನ ಮಕ್ಕಳು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು. ಇನ್ನು ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ನಾಗಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ ಮಕ್ಕಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಆದರೆ ಇಲ್ಲಿನ ಅವ್ಯವಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಆಗಲೇ ಇಲ್ಲ. ಅಧಿಕಾರಿಗಳು ಕಾಟಚಾರಕ್ಕೆ ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಲಾಗಿದ್ದು, ಮೂಕ, ಬುದ್ದಿ ಮಾಂದ್ಯ, ಕಿವುಡ ಸೇರಿ ನೂರಾರು ವಿಕಲಾಂಗ ಚೇತನ ಮಕ್ಕಳ ಗೋಳಾಟ ನಡೆಸುವಂತಾಯಿತು.
ಮಕ್ಕಳು ಊಟಕ್ಕಾಗಿ ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ತಡವಾಗಿ ಊಟ ಬಂದ್ರೂ ಹೊಟ್ಟೆ ತುಂಬಾ ಊಟ ನೀಡಿಲ್ಲ. ಹೀಗಾಗಿ, ವಿಕಲಚೇತನ ಮಕ್ಕಳ ಕಲ್ಯಾಣ ಅಧಿಕಾರಿಗಳ ವಿರುದ್ದ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ಊಟದ ವ್ಯವಸ್ಥೆಯನ್ನು ನಗರಸಭೆ ಅಧಿಕಾರಿಗಳಿಗೆ ವಹಿಸಲಾಗಿತ್ತು. ಸಕಾಲಕ್ಕೆ ಊಟದ ವ್ಯವಸ್ಥೆ ಮಾಡದೇ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳನ್ನ ಕೇಳಿದ್ರೆ, ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ, ಹೀಗಾಗಿ ಅವ್ಯವಸ್ಥೆ ಆಗಿದೆ ಅಂತ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
ವಿಶ್ವ ವಿಕಲಚೇತನರ ದಿನಾಚರಣೆಗೆ ಸರ್ಕಾರ 60 ಸಾವಿರ ರೂಪಾಯಿ ಅನುದಾನ ನೀಡಿದೆ, ಉಚಿತವಾಗಿ ಜಿಲ್ಲಾ ಕ್ರೀಡಾಂಗಣ ನೀಡಿದೆ. ಮೈಕ್ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡೋದು ಮಾತ್ರ ಇಲಾಖೆಯ ಜವಾಬ್ದಾರಿ. ಆದ್ರೆ ಅದನ್ನೂ ಸಹ ಸರಿಯಾಗಿ ಮಾಡದೆ, ಯಡವಟ್ಟು ಮಾಡಿ, ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದ್ದು ನಿಜಕ್ಕೂ ವಿಪರ್ಯಾಸ.