ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿ ಬಸ್ ನಿಲ್ದಾಣದಲ್ಲಿ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮತ್ತು ಆತಂಕವನ್ನುಂಟುಮಾಡಿದೆ.
ಮುಂಡರಗಿಯಿಂದ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಹುಡ್ಕೋ ಕಾಲೋನಿ ಬಸ್ ನಿಲ್ದಾಣವು ಪಟ್ಟಣದ ಪ್ರಮುಖ ಸಂಚಾರ ಕೇಂದ್ರವಾಗಿದ್ದು, ಪ್ರತಿದಿನ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಸೇರಿದಂತೆ ಪ್ರಯಾಣಿಕರು ಇಲ್ಲಿ ಬಸ್‌ಗಾಗಿ ಕಾದು ಕುಳಿತುಕೊಳ್ಳುತ್ತಾರೆ.
ಇಂತಹ ಜನನಿಬೀಡ ಪ್ರದೇಶದಲ್ಲೇ ವಾಮಾಚಾರ ಹಾಗೂ ಕ್ಷುದ್ರ ಪೂಜೆ ನಡೆಸಲಾಗಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
ನಿನ್ನೆ ಅಮವಾಸ್ಸೆ ದಿನದಂದು ಬಸ್ ನಿಲ್ದಾಣದ ಒಳಭಾಗದಲ್ಲಿ ಉದ್ದೇಶಪೂರ್ವಕವಾಗಿ ವಾಮಾಚಾರ ನಡೆಸಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಇಂದು ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ಜನರು ಆಗಮಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ, ಅರಿಶಿನ, ಮೊಟ್ಟೆ, ಗೊಂಬೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳು ಚದುರಿಕೊಂಡಿರುವುದು ಕಂಡುಬಂದಿದೆ.ಇದಷ್ಟೇ ಅಲ್ಲದೆ, ಹುಡ್ಕೋ ಕಾಲೋನಿಯ ಹಲವು ಸ್ಥಳಗಳಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿದ್ದು, ಈ ಘಟನೆ ಒಂದೇ ಸ್ಥಳಕ್ಕೆ ಸೀಮಿತವಾಗಿಲ್ಲ ಎಂಬ ಅನುಮಾನಗಳು ಮೂಡಿವೆ.
ಈ ರೀತಿಯ ವಾಮಾಚಾರ ಈ ಪ್ರದೇಶದಲ್ಲಿ ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳ ಹಿಂದೆಯೂ ಇದೇ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂತಹ ಕೃತ್ಯಗಳು ನಡೆದಿದ್ದವು ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಈ ಕೃತ್ಯವನ್ನು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಸಮಾಜದಲ್ಲಿ ಭೀತಿ ಉಂಟುಮಾಡುವ ಉದ್ದೇಶ ಇದಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ವಾಮಾಚಾರದ ಹಿನ್ನೆಲೆ, ಹಗಲು ಹೊತ್ತಿನಲ್ಲೇ ಬಸ್ ನಿಲ್ದಾಣದ ಬಳಿ ಹೋಗಲು ಕೂಡ ಸ್ಥಳೀಯ ನಿವಾಸಿಗಳು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.
ಸ್ಥಳೀಯರು ಪೊಲೀಸರ ಗಸ್ತಿನ ಕೊರತೆಯನ್ನೂ ಗಂಭೀರವಾಗಿ ಪ್ರಶ್ನಿಸಿದ್ದು, ನಿಯಮಿತ ಪೊಲೀಸ್ ಪೆಟ್ರೋಲಿಂಗ್ ಇದ್ದಿದ್ದರೆ ಇಂತಹ ಘಟನೆಗಳು ಮರುಕಳಿಸದಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರ ಸುರಕ್ಷತೆಗೆ ಧಕ್ಕೆಯಾಗುವಂತಹ ಘಟನೆಗಳ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಈ ಘಟನೆ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಮಾಚಾರಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
