ಗದಗ: ರಾಜ್ಯ ಸರ್ಕಾರ ನಿನ್ನೆ ರಾತ್ರಿ ಹೊರಡಿಸಿದ ಆದೇಶದಂತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಜಾರಿಗೊಂಡಿದ್ದು, ಜನರ ಮಧ್ಯೆ ಸ್ಪಷ್ಟತೆ, ಶಿಸ್ತಿಗೆ ಮಾದರಿ, ಮತ್ತು ದಿಟ್ಟ ನಿರ್ಧಾರಗಳಿಗೆ ಹೆಸರಾಗಿ, ಗದಗ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬಾಸಾಹೇಬ ನೇಮಗೌಡ ಅವರನ್ನ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಇದೀಗ 2019 ರ ಐಪಿಎಸ್ ಬ್ಯಾಚ್ನ ಯುವ ಮತ್ತು ಉತ್ಸಾಹಭರಿತ ಅಧಿಕಾರಿಯಾದ ರೋಹನ್ ಜಗದೀಶ್ ಅವರನ್ನು ಗದಗ ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
🖋ವರದಿ: ಮಹಲಿಂಗೇಶ್ ಹಿರೇಮಠ.ಗದಗ
ಹಾಗಾದ್ರೆ, ಜಿಲ್ಲೆಗೆ ಹೊಸದಾಗಿ ಬರುತ್ತಿರುವ ಎಸ್ಪಿ ರೋಹನ್ ಜಗದೀಶ್ ಅವರು ಯಾರು, ಅವರ ಹಿನ್ನೆಲೆ ಏನು? ಅಂತ ಕೇಳೋದಾದ್ರೆ. ಇಲ್ಲಿದೆ ನೋಡಿ ಮಾಹಿತಿ..
ಬಾಲ್ಯದಿಂದಲೇ ಜನಸೇವೆಗೆ ಪ್ರತಿಜ್ಞೆ – ರೋಹನ್ ಜಗದೀಶ್ ಯಾರು?..
ಮೂಲತಃ ಬೆಂಗಳೂರಿನವರಾದ ರೋಹನ್ ಜಗದಿಶ್, ಎಲ್ಲರಂತೆ ಸಾಮಾನ್ಯ ಅಧಿಕಾರಿಯಲ್ಲ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ “ರೋಹನ್ ಚಿಕ್ಕ ಹುಡುಗನಾಗಿದ್ದಾಗಲೇ ತೀವ್ರ ದೃಢನಿಶ್ಚಯ ಹೊಂದಿದ್ದರು!” ಎಂದು ರೋಹನ್ ಅವರು ತಮ್ಮನ್ನ ಭೇಟಿಯಾಗಿದ್ದ ಕುರಿತು ಅಣ್ಣಾಮಲೈ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡು, ರೋಹನ್ ಅವರತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದರು. ಆ ಮೂಲಕ ಈ ಯುವ ಅಧಿಕಾರಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಿದ್ದರು. ಇದು ಅವರ ವ್ಯಕ್ತಿತ್ವದ ಧೈರ್ಯ ಮತ್ತು ಶಿಸ್ತುಪ್ರಜ್ಞೆಗೆ ಸಾಕ್ಷಿಯಾಗಿತ್ತು.
ಇನ್ನು ಮುಖ್ಯವಾಗಿ 2021 ರ ಅಗಸ್ಟ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ತೇರ್ಗಡೆಯಾದ ನಂತರ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ರೋಹನ್ ಅವರು ತಮ್ಮ ಮಾತಿನ ಕೌಶಲ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೆಚ್ಚುಗೆಗೆ ಪಾತ್ರರಾಗಿ ಇಡೀ ಪೊಲೀಸ್ ಇಲಾಖೆ ಗಮನ ಸೆಳೆದಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನ ಪದವಿ ಪಡೆದಿರೋ ರೋಹನ್, ಅವರ ತಂದೆಯಂತಯೇ ಹಾಗೂ ತಂದೆ ಆಸೆಯಂತೆ ಪೊಲೀಸ್ ಅಧಿಕಾರಿಯಾಗುವ ಮೂಲಕ ಅವರ ಕನಸನ್ನ ನನಸು ಮಾಡಿದ್ದಾರೆ. ಇವರ ತಂದೆ ಕೂಡ ಕರ್ನಾಟಕ ಪೊಲೀಸ್ ನಲ್ಲಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ರೋಹನ್ ಅವರಿಗೆ ಇದು ಹೆಮ್ಮೆಯ ವಿಷಯ. ಅಲ್ಲದೇ ತಾವೂ ಸಹ ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದವರು ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ರೋಹನ್ ಅವರು ಬರೀ ಪೊಲೀಸ್ ಅಧಿಕಾರಿಯಷ್ಟೇ ಅಲ್ಲ, ಖ್ಯಾತ ಈಜು ಕ್ರೀಡಾಪಟು ಹಾಗೂ ಕ್ರಿಕೇಟ್ ಪ್ರೇಮಿಯೂ ಕೂಡ. ವಿಶೇಷವಾಗಿ ಲೇಖಕರು ಕೂಡ. ಈಗಾಗಲೇ ಎರೆಡು ಪುಸ್ತಕಗಳನ್ನ ಸಹ ಬರೆದಿರುವದು ಇವರ ಸಾಹಿತ್ಯಾಸಕ್ತದ ಅಭಿರುಚಿ ತೋರಿಸುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯ- ಜನಸಂಪರ್ಕಕ್ಕೆ ನೇರ ಸೇತು
ರೋಹನ್ ಅವರು, ಟ್ವಿಟರ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಸಾರ್ವಜನಿಕರಿಂದ ಬರುವ ಸಮಸ್ಯಾತ್ಮಕ ಪ್ರಶ್ನೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ವರ್ತನೆ ತೋರುತ್ತಾ ಬಂದಿರುವದು ಜನರ ಜೊತೆ ಸದಾ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಧಾನಿ ಹಾಗೂ ಗೃಹ ಸಚಿವರ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿ..
ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ತರಬೇತಿ ಪೂರ್ಣಗೊಳಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮೋದಿ ಅವರ ಹಲವು ಪ್ರಶ್ನೆಗಳಿಗೆ ತಮ್ಮ ಮಾತಿನ ತೀಕ್ಷ್ಣತೆ ಹಾಗೂ ವಿಸ್ಕೃತ ಜ್ಞಾನದಿಂದ ಉತ್ತರಿಸಿ ಸೈ ಎನ್ನಿಸಿಕೊಂಡಿದ್ದರು. ರೋಹನ್ ಜಿ ನಿಮ್ಮ ಈ ಜ್ನಾನವನ್ನ ಪೊಲೀಸ್ ವ್ಯವಸ್ಥೆಯಲ್ಲಿ ಹೇಗೆ ಅನ್ವಯಿಸುತ್ತಾರಾ? ಎಂದು ಮೋದಿ ಇವರನ್ನ ಕೇಳಿದಾಗ, ಇಂದಿನ ಗ್ಲೋಬಲೈಸೆಶನ್ ಯುಗದಲ್ಲಿ, ಪ್ರತಿ ರಾಜ್ಯದ ಪೊಲೀಸರು, ಮತ್ತೊಂದು ರಾಜ್ಯದ ಪೊಲೀಸರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ, ಅಂತರಾಷ್ತ್ರೀಯ ಮಟ್ಟದಲ್ಲೂ ನಡೆಯುವ ಕ್ರೈಂಗಳನ್ನೂ ಸಹ ನಾವು ತಡೆಯಬಹುದಾಗಿದೆ. ಕ್ರೈಂ ಕೇವಲ ಭಾರತದಲ್ಲಷ್ಟೇ ಅಲ್ಲ. ಎಲ್ಲ ರಾಷ್ತ್ರಗಳಲ್ಲೂ ವ್ಯಾಪಿಸಿದ ದೊಡ್ಡ ಜಾಲ. ಅದಕ್ಕಾಗಿ ನಾವೆಲ್ಲರೂ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದರೆ, ಭಯೋತ್ಪಾದನೆ, ಉಗ್ರಗಾಮಿತ್ವ, ಡ್ರಗ್ಸ್ ಜಾಲದಂಥ ಮುಂತಾದ ಅಂತರಾಷ್ಟ್ರೀಯ ಮಟ್ಟದ ಅಪರಾಧ ಚಟುವಟಿಕೆಗಳನ್ನ ನಾವು ನಿಲ್ಲಿಸಬಹುದಾಗಿದೆ ಎಂಬ ಅವರ ಉಲ್ಲೇಖ ವಿಶೇಷ ಗಮನ ಸೆಳೆದಿತ್ತು.
ಇನ್ನು ಪೊಲೀಸ್ ತರಬೇತಿ ಕುರಿತು ಮೋದಿ ಇವರನ್ನ ಕೇಳಿದಾಗ, ನನ್ನ ತಂದೆಯೇ ನನಗೆ ಮಾದರಿಯಾಗಿದ್ದು, ಕರ್ನಾಟಕ ಪೊಲೀಸ್ ನಲ್ಲಿ ಅವರು ಸಬ್ ಇನ್ಸಪೆಕ್ಟರ್ ಆಗಿ ಸೇರಿಕೊಂಡಿದ್ದರು. 26 ವರ್ಷಗಳ ನಂತರ ಎಸ್ಪಿ ಪದವಿ ಪಡೆದುಕೊಂಡೇ ಅವರು ನಿವೃತ್ತಿಯಾದರು. ನಾನೂ ಸಹ ಪೊಲೀಸ್ ಸೇವೆ ಸೇರುವಾಗಲೇ ನಾನೊಂದು ಘೋಷಣೆ ಬರೆದುಕೊಂಡೆ. ನಮ್ಮೊಳಗೆ ಈಗಾಗಲೇ ಒಂದು ಮೂರ್ತಿ ಇದೆ. ಆದರೆ ಅದನ್ನ ತರಬೇತಿಯಲ್ಲಿದ್ದುಕೊಂಡೇ ಆ ಮೂರ್ತಿಯನ್ನ ಶಿಸ್ತುಬದ್ಧವಾಗಿ ರೂಪಿಸಬೇಕು. ನಮ್ಮ ತರಬೇತುದಾರರು ಈ ಮೂರ್ತಿಗೆ ಕೆತ್ತನೆ ಮಾಡಿ, ನಮ್ಮನ್ನ ಉತ್ತಮ ಪ್ರತಿಮೆಯಾಗಿ ನಿರ್ಮಿಸುತ್ತಾರೆ. ಇದರಿಂದ ನಾವು ದೇಶಸೇವೆ ಮಾಡಲು ಸಿದ್ದರಾಗುತ್ತೇವೆ ಎಂದು ಉತ್ತರಿಸಿದ್ದರು.
ಆರೋಗ್ಯ ಕುರಿತು ಅವರ ನಿಲುವು – “ನಾನು ಫಿಟ್, ಭಾರತ ಫಿಟ್”
ಮುಂದುವರೆದ ಸಂವಾದದಲ್ಲಿ ಮೋದಿಜಿ ರೋಹನ್ ಅವರನ್ನ, ನೀವೊಬ್ಬ ಒಳ್ಳೆಯ ಈಜುಗಾರರಿದ್ದೀರಿ ಎಂದು ಕೇಳಿದ್ದೇನೆ. ಬರುವ ದಿನಗಳಲ್ಲಿ ಪೊಲೀಸರನ್ನ ಸುಧಾರಿಸಲು ನಿಮ್ಮ ನಿಲುವೇನು ಎಂದು ಕೇಳಿದಾಗ, ತರಬೇತಿಯಲ್ಲಿ ನೀಡಿರುವ ಫಿಟ್ನೆಸ್ ನ್ನ ನಾವು ಉಳಿಸಿಕೊಂಡು ಹೋಗಬೇಕು. ಮುಂದೆಯೂ ಕೂಡ ನಾವೊಂದು ದಿನ ಕರ್ತವ್ಯ ನಿರ್ವಹಿಸಲು ಜಿಲ್ಲೆಗೆ ಸೇರಿದಾಗ, ಅಲ್ಲಿನ ನಮ್ಮ ಸಹದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ಸರಿಯಾಗಿಟ್ಟುಕೊಳ್ಳುವ ಹಾಗೆ, ನಮ್ಮ ದೇಹದ ಸದೃಢತೆಯನ್ನ ಕಾಪಾಡಿಕೊಳ್ಳುವ ಮಾಹಿತಿ ನೀಡಲಿದ್ದೇನೆ. ನಾನು ಮಾತ್ರವಲ್ಲ, ನನ್ನ ಸುತ್ತಲಿರುವ ಸಿಬ್ಬಂದಿಯೂ ಆರೋಗ್ಯಪೂರ್ಣವಾಗಿರಬೇಕು.
ತರಬೇತಿಯಲ್ಲಿ ಸಿಕ್ಕಿರುವ ಶಾರೀರಿಕ ಶಕ್ತಿಯ ಬಾಳ್ವೆಯನ್ನು ಮುಂದುವರಿಸಬೇಕು. ಆರೋಗ್ಯವಂತ ಪೊಲೀಸ್ ಅಧಿಕಾರಿಗಳಿಂದ ಮಾತ್ರವೇ ಸಮರ್ಥ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ನನ್ನ ದೃಷ್ಟಿಕೋನ ‘I must be fit, but more importantly, India must be fit.’”
ಅಲ್ಲದೇ, ನಾನು ಫಿಟ್ ಆಗಿರುವದಷ್ಟೇ ಅಲ್ಲದೇ, ನಮ್ಮ ಭಾರತವನ್ನೂ ಫಿಟ್ ಆಗಿರುವಂತೆ ಮಾಡಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದು ಹೇಳಿದಾಗ, ಮೋದಿ ಅವರು, ರೋಹನ್ ಅವರೇ ನಿಮ್ಮನ್ನ ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮಂಥ ಉತ್ಸಾಹ ಯುವಕರು ಮುಂದೆ ಬಂದು, ನಮ್ಮ ಪೊಲೀಸ್ ವ್ಯವಸ್ಥೆಯನ್ನ ಇನ್ನೂ ಸುಧಾರಿಸಿದರೆ, ಇನ್ನಷ್ಟು ಅಭಿವೃದ್ಧಿಪಡಿಸಿದರೆ, ಒಳ್ಳೆಯ ಸೇವೆಯನ್ನ ಮಾಡಿದರೆ, ಪೊಲೀಸ್ ವ್ಯವಸ್ಥೆ ಬಗ್ಗೆ ನಮ್ಮ ದೇಶದ ಯುವಕರಲ್ಲಿ ಒಳ್ಳೆಯ ಭಾವನೆ ಮೂಡುವದರಲ್ಲಿ ಯಾವ ಸಂಶಯವಿಲ್ಲ. ದೇಶದ ಬಗ್ಗೆ ಪ್ರೀತಿಯನ್ನ ಹೆಚ್ಚಿಸುತ್ತೆ. ನಿಮ್ಮ ಜೊತೆ ಮಾತನಾಡಿದ್ದಕ್ಕೆ ಬಹಳಷ್ಟು ಸಂತೋಷವಾಯಿತೆಂದು ಮೋದಿಜಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಜೊತೆಗಿನ ವಿಡಿಯೋ ಸಂವಾದದಲ್ಲಿ ಎಸ್ಪಿ ರೋಹನ್ ಜಗದೀಶ್..
ಅಪರಾಧ ವಿರೋಧಿ ದೃಷ್ಟಿಕೋಣ: ಖಡಕ್ ಕಾರ್ಯನೈಪುಣ್ಯ..
ಅಪರಾಧ ಚಟುವಟಿಕೆಗಳ ನಿಯಂತ್ರಣ, ನೈತಿಕ ಶಿಸ್ತು ಹಾಗೂ ಪೊಲೀಸ್ ಬಲವರ್ಧನೆ ಎಂಬ ಮೂರು ಮೌಲ್ಯಗಳನ್ನ ರೋಹನ್ ಅವರ ಕೆಲಸದ ಶೈಲಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅತ್ಯಂತ ಸಕ್ರೀಯರಾಗಿದ್ದಾರೆ.
ಗದಗ ಜಿಲ್ಲೆಯ ಜನತೆಗೆ ನೀರಿಕ್ಷೆ- ಕುತೂಹಲ..
ಹೊಸದಾಗಿ ನೇಮಕಗೊಂಡಿರುವ ರೋಹನ್ ಜಗದೀಶ್, ತಮ್ಮ ಶಿಸ್ತಿನ ಕಾರ್ಯಶೈಲಿ, ಬುದ್ಧಿವಂತಿಕೆ ಹಾಗೂ ನವೋತ್ಸಾಹದೊಂದಿಗೆ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ನೂತನ ಪ್ರಭಾವ ತರಲಿದ್ದಾರಾ? ಎಂಬ ನೀರಿಕ್ಷೆ,ಕುತೂಹಲ ಜನಸಾಮಾನ್ಯರಲ್ಲಿ ಗರಿಗೆದರಿದೆ.
ವಿಶೇಷವಾಗಿ ಯುವಕರಲ್ಲಿ ಪೊಲೀಸರು ಹಾಗೂ ಸರ್ಕಾರದ ವ್ಯವಸ್ಥೆಗಳ ಬಗ್ಗೆ ನಂಬಿಕೆ ಮೂಡಿಸುವಲ್ಲಿ ಅವರು ನಿಜಕ್ಕೂ ಹೊಸ ಶಕ್ತಿಯಾಗುತ್ತಾರಾ ಅನ್ನೋದನ್ನ ಕಾದು ನೋಡಬೇಕು.