ಮುಂಡರಗಿ, ಎ.27 –
ತನ್ನದೇ ಆದ ಸ್ವತಂತ್ರ ಮತಕ್ಷೇತ್ರವನ್ನ ಹೊಂದಿದ್ದ ಮುಂಡರಗಿ, ಅನಂತರ ಕ್ಷೇತ್ರ ಪುನರ್ವಿಂಗಡನೆ ಬಳಿಕ ಅನೇಕ ಸಮಸ್ಯೆಗಳಿಗೆ ತುತ್ತಾಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಒಂದು ರೀತಿ ಅನಾಥಾಗಿದೆ ಎಂದರೂ ತಪ್ಪಿಲ್ಲ. ಕಾರಣ ಇತ್ತೀಚಿನ ಘಟನೆಯೊಂದರಲ್ಲಿ, ಪಟ್ಟಣದ ಪುರಸಭೆ ಆಡಳಿತದ ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಹೌದು, ಪಟ್ಟಣದ ಹಿರಿಯ ನಾಗರಿಕರಾದ ಜಗನ್ನಾಥಸಾ ಟಿ. ದಲಬಂಜನ (63) ಅವರು ಏಪ್ರಿಲ್ 25 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಯೋಸಹಜ ಕಾರಣದಿಂದ ನಿಧನರಾದರು. ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ಪುರಸಭೆಯಿಂದ ಶವಯಾತ್ರೆ ವಾಹನವನ್ನು ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಶವಯಾತ್ರೆಗಾಗಿ ಮಾರನೆ ದಿನ (ಎ. 26) ಬೆಳಿಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ನಿರ್ಧರಿಸಲಾಗಿತ್ತು.
ಅಂದು ಬೆಳಿಗ್ಗೆ 9 ಗಂಟೆಗೆ ಕುಟುಂಬಸ್ಥರು ಪುರಸಭೆಗೆ ತೆರಳಿ, ಶವಯಾತ್ರೆ ವಾಹನವನ್ನು ತರಲು ಪ್ರಯತ್ನಿಸಿದರು. ಆದರೆ, ವಾಹನವು ಪುರಸಭೆ ಗೇಟು ದಾಟುವಷ್ಟರಲ್ಲಿಯೇ ನಿಂತು ಮುಂದೆ ಸಾಗಲೇ ಇಲ್ಲ. ಚಾಲಕ ಮತ್ತು ಕುಟುಂಬಸ್ಥರು ಸಾಕಷ್ಟು ಪ್ರಯತ್ನಿಸಿದರೂ ವಾಹನ ಚಾಲನೆ ಸಾಧ್ಯವಾಗಲಿಲ್ಲ. ಚಾಲಕ ಬ್ಯಾಟರಿ ವೀಕ್ ಆಗಿದೆ ಎಂದಿದ್ದು, ಕುಟುಂಬಸ್ಥರು ತಕ್ಷಣವೇ ಬ್ಯಾಟರಿ ತರಿಸಿ ಹಾಕಿದರು. ಆದರೆ ಸಮಸ್ಯೆ ಮುಂದುವರಿದಿದ್ದು, ನಂತರ ಡಿಸೆಲ್ ಕೊರತೆ ಕಾರಣವಂತೆ ತಿಳಿದುಬಂದಿತು. ಅದನ್ನೂ ಕುಟುಂಬಸ್ಥರು ಪರಿಹರಿಸಿದರು. ಆದರೂ ವಾಹನ ಶರುವಾಗಲಿಲ್ಲ.

ಮೇಲಿನ ಪೋಸ್ಟ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣಮಾಹಿತಿ ಒದಗುತ್ತದೆ.
ಇನ್ನು ಮುಂದುವರಿದ ದುರಸ್ಥಿಯಲ್ಲಿಯೇ, ಫ್ಯೂಸ್ ತೊಂದರೆ ಎಂಬ ಹೊಸ ಸಮಸ್ಯೆಯೂ ಉದಯವಾಯಿತು. ಅದು ಸರಿಪಡಿಸಿದರೂ ವಾಹನ ಚಾಲನೆಯಾಗಲೇ ಇಲ್ಲ. ಪರಿಣಾಮವಾಗಿ, ಶವಯಾತ್ರೆಗಾಗಿ ಕಾಯುತ್ತಿದ್ದ ಕುಟುಂಬಸ್ಥರು ತೀವ್ರ ಮನಸ್ತಾಪಕ್ಕೆ ಒಳಗಾದರು. ಒಂದೆಡೆ ಶವಯಾತ್ರೆ ವಾಹನಕ್ಕಾಗಿ ಸಮಾಜದ ಸದಸ್ಯರು ಪರದಾಟ ನಡೆಸುತ್ತಿದ್ದರೆ, ಅತ್ತ ಮನೆಯ ಹಿರಿಯ ಯಜಮಾನನ್ನ ಕಳೆದುಕೊಂಡ ಕುಟುಂಬಸ್ಥರ ರೋಧನೆ ಸಮಯ ನೋಡುತ್ತಿತ್ತು.
ಕೊನೆಗೂ ಶವಯಾತ್ರೆ ವಾಹನ ಬೇಕಾದ ಸಮಯದಲ್ಲಿ ಸಿದ್ಧವಾಗದೇ, ಮೂರಕ್ಕೂ ಹೆಚ್ಚು ಗಂಟೆಗಳ ಕಾಲ ಪುರಸಭೆಯ ಬಾಗಿಲಲ್ಲಿ ವಾಹನ ಸ್ಥಬ್ಧವಾಗಿ ನಿಂತಿತ್ತು.

ಇತ್ತ ಮನೆಯಲ್ಲಿದ್ದ ಮೃತರ ಕುಟುಂಬಸ್ಥರು ದುಃಖದಲ್ಲಿಯೇ ಬಹಳ ಹೊತ್ತು ಕಾಲ ಕಳೆಯಬೇಕಾಯಿತು,ಹೀಗೆಅಂತ್ಯಕ್ರಿಯೆ ಸಮಯ ಮೀರಿದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ, ಕೈ ಕೊಟ್ಟ ಪುರಸಭೆ ವಾಹನವನ್ನು ಬಿಟ್ಟು, ಕುಟುಂಬಸ್ಥರು ಖಾಸಗಿ ಟಾಟಾ ಏಸ್ ವಾಹನವನ್ನು ಬಾಡಿಗೆಗೆ ಪಡೆದು, ಮದ್ಯಾಹ್ನದ ನಂತರ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಈ ಘಟನೆ ಪುರಸಭೆಯ ನಿರ್ಲಕ್ಷ್ಯಾಚರಣೆಗೆ ಸ್ಪಷ್ಟ ಸಾಕ್ಷಿಯಾಗಿದೆ. “ಪಟ್ಟಣದಂತಹ ಒಂದು ಮಹತ್ವದ ಸ್ಥಳದಲ್ಲಿ ಒಂದು ಶವಯಾತ್ರೆ ವಾಹನವೂ ಸರಿ ರೀತಿಯಲ್ಲಿ ರಕ್ಷಣೆಯಲ್ಲಿ ಇಲ್ಲದಿದ್ದರೆ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಆಡಳಿತ ಎಲ್ಲಿ?” ಎಂಬ ಪ್ರಶ್ನೆ ನಾಗರಿಕರ ನಡುವೆ ಹುಟ್ಟಿದೆ.
ಮೊದಲೇ ಹೇಳಿದಂತೆ, ಮುಂಡರಗಿ ಪಟ್ಟಣಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎನ್ನುವದರಲ್ಲಿ ಎರೆಡು ಮಾತಿಲ್ಲ. ಕಾರಣ ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಬಡವರಿಗೆ ನಿವೇಶನ ಹಂಚಿಕೆಯಿಲ್ಲ, ಉದ್ಯಾನವನಗಳ ಅಭಿವೃದ್ಧಿಯಿಲ್ಲ, ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆಗಳ ಅಸಹಜ ಸ್ಥಿತಿ ಮೊದಲಾದ ಅನೇಕ ಸಮಸ್ಯೆಗಳು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿವೆ. ಇವುಗಳಿಗೆ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವೆಂಬ ಅಭಿಪ್ರಾಯ ವ್ಯಾಪಕವಾಗಿದೆ.
“ಮೃತ ವ್ಯಕ್ತಿಯ ಕುಟುಂಬಸ್ಥರು ಸಾವಿನ ನೋವಿನಿಂದ ಕಂಗಾಲಾಗಿರುವಾಗ, ಅಂತ್ಯಕ್ರಿಯೆ ಸಮಯದಲ್ಲೂ ಈ ರೀತಿ ಪರದಾಟ ಅನುಭವಿಸುವ ಸ್ಥಿತಿಯನ್ನೆ ಪುರಸಭೆ ಆಡಳಿತ ಕಟ್ಟಿಕೊಂಡಿದ್ದು ವಿಷಾದನೀಯ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ನಾಗರಿಕರು ಒತ್ತಾಯಿಸಿದ್ದಾರೆ.
