Headlines

ವಿನಯ್ ಚಿಕ್ಕಟ್ಟಿ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ:ಶೋಧನೆ, ಸಂಶೋಧನೆ ಮಾಡಿದಾಗ ಮಾತ್ರ ಹೊಸದನ್ನು ಸಾಧಿಸಬಹುದು:ಎಮ್.ಎಸ್. ಸವದತ್ತಿ

ಗದಗ:ಶೋಧನೆ-ಸಂಶೋಧನೆ ಮಾಡಿದಾಗ ಮಾತ್ರ ಹೊಸದನ್ನು ಸಾಧಿಸಬಹುದು, ಹಾಗೆ ಸಂಶೋಧನೆ ಮಾಡಿ ಏಷ್ಯಾಖಂಡದಲ್ಲಿಯೇ ಸರ್ ಸಿ.ವಿ. ರಾಮನ್‌ರು ಪ್ರಥಮ ನೋಬೆಲ್ ಪ್ರಶಸ್ತಿಗೆ ಭಾಜನರಾದರು ಎಂದು ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾದ ಎಂ.ಎಸ್.ಸವದತ್ತಿಯವರು ಹೇಳಿದರು.

ಅವರು ಗದಗನ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಸಂಸ್ಥೆಯ ವಿನಯ್ ಚಿಕ್ಕಟ್ಟಿ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನಮಗೆ ಜೀವನದಲ್ಲಿ ಒಮ್ಮೆ ಅವಕಾಶ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಸದುಪಯೋಗ  ಪಡಿಸಿಕೊಳ್ಳಬೇಕು. ಹಾಗೆ ಅವಕಾಶವನ್ನು ಸದುಪಯೋಗ  ಪಡಿಸಿಕೊಂಡ ಸ್ವಾಮಿ ವಿವೇಕಾನಂದರು ಹಾಗೂ ಡಾ. ಎ. ಪಿ. ಜೆ ಅಬ್ದುಲ್ ಕಲಾಂರವರು ಸಿಕ್ಕಂತಹ ಅವಕಾಶವನ್ನು ಬಳಸಿ ತಮ್ಮ ಜ್ಞಾನವನ್ನು ಬೆಳಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ತೋರಿಸಿಕೊಟ್ಟರು. ಶ್ರೇಷ್ಠ ಸಂತರು ಹಾಗೂ ಜಗತ್ ಪ್ರಸಿದ್ದ ವಿಜ್ಞಾನಿಗಳಾದರು. ಇಂತಹ ಸಾಧಕರನ್ನು ನಾವು-ನೀವು ಅನುಸರಿಸುತ್ತ ಸತತ ಪ್ರಯುತ್ನ ಮಾಡಿದರೆ ಯಶಸ್ಸೆಂಬುದು ನಿಮಗಾಗಿ ಕಾಯುತ್ತಿರುತ್ತದೆ ಎಂದರು.

ಸರ್ ಸಿ.ವಿ. ರಾಮನ್‌ರು ಬೆಳಕಿನ ಚದುರುವಿಕೆಯ ಕುರಿತು ಸಂಶೋಧನೆ ಮಾಡಿದರು.ಆ ಮೂಲಕ ಭಾರತದ ಹಿರಿಮೆಯನ್ನು ಜಗತ್‌ಪ್ರಸಿದ್ಧಗೊಳಿಸಿದರು. ಅವರ ಈ ಸಾಧನೆಯ ಪ್ರಯುಕ್ತ ಪ್ರತಿ ವರ್ಷ ಫೆಬ್ರುವರಿ – 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಹೆಮ್ಮೆಯಿಂದ ನಾವೆಲ್ಲರೂ ಆಚರಿಸುತ್ತೇವೆ. ಅದೇ ರೀತಿ ಚಿಕ್ಕಟ್ಟಿ ಶಾಲೆಯಲ್ಲಿ ಆಚರಿಸುವುದರೊಂದಿಗೆ ಮಕ್ಕಳು ವೈಜ್ಞಾನಿಕ  ಪ್ರಯೋಗದ ಮಾದರಿಗಳನ್ನ ಮಾಡುವ ಮೂಲಕ ಆಚರಣೆಗೆ ತಂದು ಸಿ.ವಿ. ರಾಮನ್ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಮಾದರಿಗಳನ್ನು ನೋಡುತ್ತಿದ್ದರೆ ಒಂದಕ್ಕಿಂತ ಒಂದು ಅದ್ಭುತವಾಗಿವೆ, ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ವಿದ್ಯಾರ್ಥಿಗಳ, ಮಾದರಿಗಳನ್ನು ನೋಡಿದ ಮೇಲೆ ಅವುಗಳನ್ನು ತಯಾರಿಸಿದ ಮೂಲ ವಿಜ್ಞಾನಿಗಳು ನೆನಪಾದರು.

              ನಮ್ಮ ಹಿರಿಯರು ಆಚರಿಸುವ ಆಚರಣೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಅದರೊಳಗಿನ ಸತ್ಯಾಂಶ ತಿಳಿಯುತ್ತೆ. ಅಮವಾಸ್ಯೆ, ಹುಣ್ಣಿಮೆಗಳಂತ ದಿನದಂದು ಮೆನೆಯಲ್ಲಿ ಊಟಕ್ಕೆ ಸಿಹಿ ಪದಾರ್ಥ ಮಾಡಿರುತ್ತಾರೆ, ನಮ್ಮ ದೇಹಕ್ಕೆ ಆ ಪದಾರ್ಥಗಳ ಅವಶ್ಯಕತೆಯು ಇರುತ್ತದೆ, ನಮ್ಮ ಹಿರಿಯರು ಕಾಲಗಳಿಗೆ ತಕ್ಕಂತೆ ತಮ್ಮ ದಿನಚರಿ, ಊಟ, ತಿಂಡಿ – ತಿನಿಸುಗಳು, ಉಡುಗೆ – ತೊಡುಗೆಗಳ ಬದಲಾವಣೆ ಮಾಡುತ್ತಿದ್ದರು. ಅವರು ಯಾವ ವಿಜ್ಞಾನವನ್ನು ಓದಿರದವರು ತಮ್ಮ ಸಾಮಾನ್ಯ ಜ್ಞಾನದಿಂದಲೇ ತಿಳಿದು ಅನುಸರಿಸುತ್ತಿದ್ದರು, ಅಂತವುಗಳನ್ನ ತಿಳಿಯುವುದರೊಂದಿಗೆ ಪ್ರಯೋಗಗಳ ಮೂಲಕ ಹೊಸದನ್ನ ಕಂಡುಕೊಂಡು ಸಾಧನೆ ಮಾಡಿ ತಾವೂ ಸಹ ವಿಜ್ಞಾನಿಗಳಾಗಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ದಯಟ್ ಉಪನ್ಯಾಸಕರಾದ ಜಿ.ಡಿ. ದಾಸರ್ ಅವರು ಮಾತನಾಡಿ,ಸರ್. ಸಿ.ವಿ. ರಾಮನ್‌ರು ಬಹಳ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು, ರಾಜಕೀಯ ಉನ್ನತ  ಹುದ್ದೆಗಳು ಅವರನ್ನ ಹುಡುಕಿಕೊಂಡು ಬಂದರೂ ಅವುಗಳನ್ನೆಲ್ಲ ವಿನಯದಿಂದಲೇ ತಿರಸ್ಕರಿಸಿದರು, ಅವರು ಹೇಳುತ್ತಿದ್ದುದು, ನನ್ನ ಜೀವಮಾನದ ಅಂತ್ಯದವರೆಗೂ ಮಕ್ಕಳಿಗೆ ಬೋಧಿಸುವುದರೊಂದಿಗೆ ವೈಜ್ಞಾನಿಕ ಪ್ರಯೋಗಗಳನ್ನು ತಿಳಿಸುವುದೇ ನನ್ನ ಗುರಿ ಮತ್ತು ಉದ್ದೇಶ ಎಂದರು.

ಅವರೊಮ್ಮೆ ಜಿ.ಡಿ. ಬಿರ್ಲಾ ಅವರಿಗೆ ಒಂದು ಪತ್ರ ಬರೆಯುತ್ತಾರೆ ನನಗೊಂದು “ಸ್ಪೆಕ್ಟರ್ ಸ್ಕೋಪ್” ಬೇಕು, ಅದಕ್ಕೋಸ್ಕರ ಅನುದಾನವನ್ನು ಬಿಡುಗಡೆ ಮಾಡಿರಿ, ಆ ಮೂಲಕ ನಾನು ಸಂಶೋಧನೆ ಮಾಡಿ ದೇಶಕ್ಕೆ ನೋಬೆಲ್ ಪಾರಿತೋಷಕ ಪ್ರಶಸ್ತಿ ತಂದು ಕೊಡುತ್ತೇನೆಂದು ಪತ್ರ ಬರೆದರು, ಅದಾದ ನಂತರ ಮುಂದೆ ಐದೇ ವರ್ಷಗಳಲ್ಲಿ ನುಡಿದಂತೆ ನಡೆದು ನೋಬೆಲ್ ಪ್ರಶಸ್ತಿಯನ್ನ ತಂದು ಕೊಟ್ಟ ಪಂಡಿತೋತ್ತಮ ವಿಜ್ಞಾನಿ, ಏಷ್ಯಾ ಖಂಡದಲ್ಲಿಯೇ ಪ್ರಥಮ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ವಿಜ್ಞಾನಿಯೆಂದು ಜಗತ್ ಪ್ರಸಿದ್ಧರಾದರು.

ನಾವು ಸಹ ಕಡಿಮೆ ಇಲ್ಲ ಎನ್ನುವಂತೆ ಈ ಶಾಲೆಯ ವಿದ್ಯಾರ್ಥಿಗಳು ರಚಿಸಿದ ತಾಂತ್ರಿಕ ಮಾದರಿಗಳು ಹಾಗೂ ವೈಜ್ಞಾನಿಕ  ಪರಿಕಲ್ಪನೆಗಳ ಮಾದರಿಗಳನ್ನು  ನೋಡಿದಾಗ ಒಂದು ಕ್ಷಣ ನಮಗೂ ಆಶ್ಚರ್ಯವಾಯಿತು, “ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ನೋಡು” ಎನ್ನುವ ನುಡಿಯಂತೆ ಬಾಲ್ಯದಲ್ಲಿಯೇ ಈ ಮಕ್ಕಳು ತಯಾರಿಸಿದ  ವೈಜ್ಞಾನಿಕ  ಪರಿಕರಗಳನ್ನು ಗಮನಿಸಿದಾಗ ಮುಂದಿನ ದಿನಮಾನಗಳಲ್ಲಿ ಇವರೂ ಸಹ ತಮ್ಮದೇ ಆದ ಪ್ರಯೋಗವನ್ನು ಮಂಡಿಸುವಂತಾಗುತ್ತಾರೆಂದು ಹೇಳಿದರು.

ಚಿಕ್ಕಟ್ಟಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ತಿಳಿಸಿದರು. ನಂತರ ಮಾತನಾಡಿದ ಅವರು,ಎಮ್. ಎಸ್. ಸವದತ್ತಿಯವರು ಹಾಗೂ ಜಿ.ಡಿ ದಾಸರ್‌ರವರು ಸಾಮಾನ್ಯರಲ್ಲ, ಇಂತಹ ಅನೇಕ ವೈಜ್ಞಾನಿಕ ಪ್ರಯೋಗಳನ್ನು ಮಾಡಿಸಿದವರು, ಅವರ ಜ್ಞಾನ ಇಂದು ನಮ್ಮ ಮಕ್ಕಳಿಗೆ ಸಿಗುವಂತಾಗಿದೆ, ಅದು ನಮ್ಮೆಲ್ಲರ ಸೌಭಾಗ್ಯ, ಇಂತಹ ಗೌರವಯುತ ಸಾಧಕರು ನಮ್ಮ ವೈಜ್ಞಾನಿಕ ವಸ್ತುಗಳ ಪ್ರದರ್ಶನಕ್ಕೆ ಬಂದಿರುವದು ಮೆರಗು ತಂದಿದೆ ಎಂದರು. 

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಇದೇ ವೇಳೆ ಮುಖ್ಯ ಅತಿಥಿಗಳಿಗೆ ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ  ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವಿನಯ್ ಚಿಕ್ಕಟ್ಟಿ ಶಾಲೆಯ ಉಪಪ್ರಾಚಾರ್ಯರಾದ ಶೋಭಾ ಸ್ಥಾವರಮಠ, ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ ಹಾಗೂ ಹಿರಿಯ ಉಪನ್ಯಾಸಕರಾದ ಅನಿಲ್ ನಾಯಕ್ ಅವರು ಉಪಸ್ಥಿತರಿದ್ದರು.

ಬಿಪಿನ್ ಚಿಕ್ಕಟ್ಟಿ  ಶಾಲೆಯ ಉಪಪ್ರಾಚಾರ್ಯರಾದ ರಿಯಾನ ಮುಲ್ಲಾ ಸ್ವಾಗತಿಸಿದರೆ, ಕುಮಾರಿ ಶ್ರೀರಕ್ಷಾ ಕವಲೂರು, ಅನಿಶಾ ದೊಡ್ಡಮನಿ ಹಾಗೂ ರಕ್ಷಾ ಸೊಪ್ಪಿನ  ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಶಿಕ್ಷಕಿಯರಾದ ಹರ್ಷ ದೇವಮಾನೆ ಹಾಗೂ ಮಿಸ್ಬಾ ಎಸ್ ನಿರೂಪಿಸಿದರೆ, ಶಿಕ್ಷಕಿಯರಾದ ಮೇರಿ ಯೋಹನ್ ವಂದನಾರ್ಪಣೆಗೈದರು. ವಿದ್ಯಾರ್ಥಿಗಳು ರಚಿಸಿದ ತಾಂತ್ರಿಕ ಮಾದರಿಗಳನ್ನು ಹಾಗೂ ವಿವಿಧ ವೈಜ್ಞಾನಿಕ ಪರಿಕಲ್ಪನೆಗಳ ಪ್ರದರ್ಶವನ್ನು ಅತಿಥಿ ಮಹೋದಯರೊಂದಿಗೆ ನೆರೆದಿರುವ ಪಾಲಕರು ನೋಡಿ ಆಶ್ಚರ್ಯಚಕಿತರಾಗಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *