Headlines

ಪುರಸಭೆ ಸ್ಥಾಯಿ ಸಮಿತಿ ಚೆರ್ಮನ್ ಆಗಿ ವಿಜಯ ಆಯ್ಕೆ

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 19 ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ವಿಜಯ ಕರಡಿ ಆಯ್ಕೆಯಾದರು.

ಪುರಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಸಭೆಯಲ್ಲಿ ವಿಜಯ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಒಟ್ಟು 23 ಮಂದಿ ಪುರಸಭಾ ಸದಸ್ಯರಲ್ಲಿ, ಕಳೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾಗಿ 11 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಈ ಸದಸ್ಯರೆಲ್ಲಾ ಸೇರಿ ವಿಜಯ ಕರಡಿ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದರು.

ಕೆಲವು ತಿಂಗಳ ಹಿಂದೆ ಖಾಲಿಯಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿಗೆ ಸದಸ್ಯರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ನಡೆದ ಚುನಾವಣೆಯಲ್ಲಿ ವಿಜಯ ಅವರಿಗೆ ಅಧ್ಯಕ್ಷ ಗಾದಿಯ ಪಟ್ಟ ಒಲಿಯಿತು.

ಈ ವೇಳೆ ಮಾತನಾಡಿದ ವಿಜಯ ಕರಡಿ ‘ನನ್ನ ಆಯ್ಕೆಗೆ ಸಹಕರಿಸಿದ ನನ್ನೆಲ್ಲ ಹಿರಿಯ ಸದಸ್ಯರು, ಹಿರಿಯ ಮಾರ್ಗದರ್ಶಕರು, ಪುರಸಭೆ ಎಲ್ಲಾ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ವಿಜಯ ಕರಡಿ ಹೇಳಿದರು.

‘ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ, ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಸೇರಿದಂತೆ ನಗರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಎಲ್ಲಾ ಸದಸ್ಯರನ್ನು ವಿ‌ಶ್ವಾಸಕ್ಕೆ ತೆಗೆದುಕೊಂಡು ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜೀವ ಕುಂಬಿ, ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ರಾಮಪ್ಪ ಗಡದವರ,ಸಿಕಂದರಭಾಶಾ ಕಣಕೆ, ಮಂಜವ್ವ ನಂದೆಣ್ಣವರ್ ಹಾಗೂ ಪುರಸಭೆ ಉಪಾಧ್ಯಕ್ಷ ಫೀರಧೋಷ್ ಆಡೂರ ಉಪಸ್ಥಿತಿ ಇದ್ದರು ಮತ್ತು ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *