ವಿಜಯಪುರ: ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಲೋಕಕ್ಕೆ ದುಃಖದ ಸುದ್ದಿ. ಖ್ಯಾತ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಣಿಪಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಧಾರವಾಡ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ತಾಳಿಕೋಟೆ, ನಾಟಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಹಾಸ್ಯ ಶೈಲಿಯಿಂದ ಅಭಿಮಾನಿಗಳ ಮನಗೆದ್ದಿದ್ದರು.
ಉಡುಪಿಯಲ್ಲಿ ನಟ ಶೈನ್ ಶೆಟ್ಟಿ ಅಭಿನಯಿಸುತ್ತಿರುವ ಹೊಸ ಚಲನಚಿತ್ರದ ಚಿತ್ರೀಕರಣಕ್ಕಾಗಿ ಅವರು ಕೆಲವು ದಿನಗಳಿಂದ ವಾಸ್ತವ್ಯ ಮಾಡುತ್ತಿದ್ದರು. ಭಾನುವಾರ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರ ಪ್ರಯತ್ನ ಫಲಕಾರಿಯಾಗಲಿಲ್ಲ.
ರಾಜು ತಾಳಿಕೋಟೆ ಅವರಿಗೆ ಈ ಮೊದಲು ಕೂಡ ಹೃದಯಾಘಾತವಾಗಿದ್ದು, ಅಂದಿನ ಚಿಕಿತ್ಸೆ ನಂತರ ಅವರು ಚೇತರಿಸಿಕೊಂಡಿದ್ದರು. ಆದರೆ ಇತ್ತೀಚಿನ ಕೆಲಸದ ಒತ್ತಡದಿಂದ ಆರೋಗ್ಯ ಹದಗೆಟ್ಟಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅವರ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮ ವಿಜಯಪುರದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಕನ್ನಡ ರಂಗಭೂಮಿಯ ಸಮರ್ಪಿತ ಕಲಾವಿದನ ಅಗಲಿಕೆಯಿಂದ ಕಲಾರಂಗ ಶೋಕಸಮುದ್ರದಲ್ಲಿದೆ.
