ಗದಗ(ಮುಂಡರಗಿ): ರಾಜ್ಯ ಸರ್ಕಾರ ನಾಳೆಯಿಂದ (ಸೆಪ್ಟೆಂಬರ್ 22) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿದೆ. ಸರ್ಕಾರವು ಇದು ಜಾತಿ ಗಣತಿ ಅಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದಾದರೂ, ಸಮೀಕ್ಷೆಯ ಹೆಸರಿನಲ್ಲಿ ಜಾತಿ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗುತ್ತಿರುವುದು ಎಲ್ಲರಿಗೂ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ವಿಶೇಷವಾಗಿ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಸ್ಪಷ್ಟ ನಿಲುವು ವ್ಯಕ್ತವಾಗದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಈ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಂಡರಗಿಯ ಸಂಸ್ಥಾನಮಠದ ಶ್ರೀ ಮನಿಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪೂಜ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸಮಾಜದ ಏಕತೆಗೆ ಹಾನಿ ಉಂಟಾಗದಂತೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಸಂದೇಶ ನೀಡಿದ್ದಾರೆ.
ಜಗದ್ಗುರುಗಳು ಹೇಳುವಂತೆ, “ಸೆಪ್ಟೆಂಬರ್ 19 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ದೇಶದ ವಿವಿಧೆಡೆಗಳಿಂದ ಮಠಾಧೀಶರು, ಸಮಾಜದ ಶರಣ ತಂದೆ-ತಾಯಿಗಳು ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡು ಏಕತೆಯ ಭಾವವನ್ನು ತೋರಿದರು. ಆದರೆ ಅಲ್ಲಿ ಜಾತಿಗಣತಿಯ ಕುರಿತಂತೆ ಸ್ಪಷ್ಟ ಸಂದೇಶ ಹರಡಲಿಲ್ಲ.
ಕೆಲವರು ವೀರಶೈವ-ಲಿಂಗಾಯತರು ಹಿಂದೂಗಳೆಂದು ವಾದಿಸಿದ್ದು ತಕ್ಕದ್ದಲ್ಲ. ಇದರಿಂದ ಸಮಾಜದಲ್ಲಿ ಏನು ಬರೆಸಬೇಕು ಎಂಬ ಗೊಂದಲ ಮೂಡಿದೆ. ವಾಸ್ತವವಾಗಿ ವೀರಶೈವ-ಲಿಂಗಾಯತರು ದೇಶವ್ಯಾಪಿಯಾಗಿ ಹಿಂದುಗಳೇ. ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಎಲ್ಲರೂ ಹಿಂದೂಗಳೇ. ಆದರೆ ಭಾರತೀಯ ಜನಗಣತಿಯಲ್ಲಿ ಜೈನ, ಬೌದ್ಧ, ಕ್ರೈಸ್ತ ಹೀಗೆ ಆರು ಧರ್ಮಗಳನ್ನು ಪ್ರತ್ಯೇಕವಾಗಿ ದಾಖಲಿಸಿ ಉಳಿದವರನ್ನು ‘ಇತರರು’ ಎಂದು ಉಲ್ಲೇಖಿಸಲಾಗಿದೆ” ಎಂದರು.
ಪೂಜ್ಯರ ಅಭಿಪ್ರಾಯದಲ್ಲಿ, ಹಿಂದೂ ಸಮೂಹದಲ್ಲಿಯೇ ವೀರಶೈವರ ಗಣನೆ ಕ್ರಮೇಣ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. “ವೀರಶೈವ-ಲಿಂಗಾಯತರು ವರ್ಣಾಶ್ರಮಕ್ಕೆ ಒಳಪಡುವವರು ಅಲ್ಲ. ಬಹುದೇವತೆಗಳನ್ನು ಒಪ್ಪಿಕೊಳ್ಳದ ಏಕದೇವೋಪಾಸಕರು. ಆದರೆ ಅತೀ ವರ್ಣಾಶ್ರಮಿಗಳಾದವರು. ಆದರೆ ಧರ್ಮತತ್ತ್ವದ ನಿಜಸ್ವರೂಪವನ್ನು ಅರಿಯದೆ, ವೀರಶೈವರನ್ನು ಹಿಂದೂಗಳೆಂದು ಮಾತ್ರ ದಾಖಲಿಸುವುದು ನ್ಯಾಯೋಚಿತವಲ್ಲ. ಸಮಾಜದ ಹಾಗೂ ಮಠಾಧೀಶರ ಕೊಡುಗೆ ಅಪಾರವಾಗಿದೆ.
ಆದ್ದರಿಂದ ಧರ್ಮತತ್ತ್ವದ ಪ್ರಕಾರ ‘ವೀರಶೈವ-ಲಿಂಗಾಯತ ಧರ್ಮ’ ಎಂದೇ ಪ್ರತ್ಯೇಕವಾಗಿ ದಾಖಲಿಸುವುದು ಸೂಕ್ತ. ಉಪ ಜಾತಿಗಳನ್ನು ಉಪಕಾಲಮಿನಲ್ಲಿ ದಾಖಲಿಸಬಹುದು” ಉದಾಹರಣೆಗೆ, ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಿ, ಉಪಜಾತಿ ಕಾಲಂನಲ್ಲಿ ನೀವು ಜಂಗಮರಾಗಿದ್ದರೆ, ಜಂಗಮ, ಬಣಜಿಗರಾಗಿದ್ದರೆ ಬಣಜಿಗ ಹೀಗೆ ನಿಮ್ಮ ಉಪಜಾತಿಗಳನ್ನ ಬರೆಸುವದು ಸೂಕ್ತ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.
ಹೀಗೆ, ರಾಜ್ಯ ಸರ್ಕಾರದ ಸಮೀಕ್ಷೆ ಪ್ರಾರಂಭಕ್ಕೂ ಮುನ್ನವೇ ವೀರಶೈವ-ಲಿಂಗಾಯತ ಸಮುದಾಯದ ಒಳಗಿರುವ ಅನಿಶ್ಚಿತತೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಂಡರಗಿ ಸಂಸ್ಥಾನಮಠದ ಶ್ರೀಗಳ ಈ ಪ್ರಕಟಣೆ ವಿಶೇಷ ಪ್ರಾಮುಖ್ಯತೆ ಪಡೆದಿದೆ.