ಹೊನ್ನಾವರ: ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಹೊನ್ನಾವರ ತಾಲೂಕಿನ ಗೇರಸೊಪ್ಪದ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಹಾಗೂ ಪ್ರತಿಷ್ಠಾನ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಮಿಕ್ರಮಗಳು ಜರಗಿದವು.
ಈ ವೇಳೆ ಶ್ರೀ ವೀರಾಂಜನೇಯ ದೇವರ ಪ್ರತಿಷ್ಠೆ, ನೂತನ ಗೋಪುರ, ಸ್ವರ್ಣ ಕಳಶ ಪ್ರತಿಷ್ಠೆ, ಶ್ರೀ ಮಹಾಗಣಪತಿ ಪ್ರತಿಷ್ಠೆ, ನಾಗಬನದಲ್ಲಿ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ ಹಾಗೂ ಶ್ರೀ ಚೌಡೇಶ್ವರಿ ಪ್ರತಿಷ್ಠೆ ಮತ್ತು ನವಗ್ರಹ ಪ್ರತಿಷ್ಠೆ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ನಡೆದವು.

ಕಳಶ ಪ್ರತಿಷ್ಠೆ ವೇಳೆ ಭಕ್ತ ಸಮೂಹದ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ವಾದ್ಯ ಮೇಳೆ, ಮಂತ್ರೋದ್ಘಾರದ ಮೂಲಕ ನಡೆದ ವಿವಿಧ ಧಾರ್ಮಿಕ ಕಾರ್ಯಗಳು ಭಕ್ತ ಸಮೂಹವನ್ನು ಭಕ್ತಿ ಪರಾಕಾಷ್ಟೆ ತಲುಪುವಂತೆ ಮಾಡಿತು.
ಬೆಳಿಗ್ಗೆಯಿಂದ ಆರಂಭವಾದ ನಿರಂತರ ಪೂಜೆ, ಭಜನೆಯ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕತೆ ಸುಗಂಧ ಸೂಸುವಂತಿತ್ತು.ಧಾರ್ಮಿಕ ಕಾರ್ಯದ ಸಂದರ್ಭದಲ್ಲಿ ಭಕ್ತರು ಶ್ರೀರಾಮ ತಾರಕ, ಹನುಮಾನ ಜಪ, ಹನುಮಾನ ಚಾಲೀಸಾ ಪಠಣದ ಮೂಲಕ ಭಕ್ತಿ ಸಮರ್ಪಣೆಯಲ್ಲಿ ಮಂತ್ರಮುಗ್ಧರಾಗಿದ್ದರು.
ಈ ಸಂದರ್ಭದಲ್ಲಿ ಪುರೋಹಿತರು, ಕ್ಷೇತ್ರದ ಭಕ್ತ ಸಮೂಹ, ಗುರುಗಳ ಶಿಷ್ಯ ಬಳಗ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.