ಗದಗ: ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳನ್ನು ಕಾನೂನು ಬಾಹಿರವಾಗಿ ಲೀಜ್ ನೀಡಿದ ಹಾಗೂ ನಕಲಿ ಸಹಿ ಮಾಡಿದ ಆರೋಪದಡಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಇಬ್ಬರು ಸದಸ್ಯರನ್ನೊಳಗೊಂಡು ಒಟ್ಟು 8 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.
ಗದಗ ನಗರದ ಅಕ್ಷಯ ಕಾಲೋನಿ ನಿವಾಸಿ ವಿರುಪಾಕ್ಷಪ್ಪ(ರಾಜು) ಗಂಗಾಧರಪ್ಪ ಮಾನ್ವಿ, ರೀಯಲ್ ಎಸ್ಟೇಟ್ ಉದ್ಯಮಿ ಪಂಕಜ್ ರೂಪಚಂದ್ ಬಾಫಣಾ, ಶಿದ್ದಪ್ಪ ಮಲ್ಲಪ್ಪ ಮಾರನಬಸರಿ, ವೀರೇಶ ಷಣ್ಮುಖಪ್ಪ ಕುಂದಗೋಳ, ಮಹೇಶ ವೆಂಕಟೇಶ ದಾಸರ, ಉಷಾ ಮಹೇಶ ದಾಸರ, ಅನಿಲ(ಶಿದ್ದಲಿಂಗಪ್ಪ) ಮಲ್ಲಪ್ಪ ಅಬ್ಬಿಗೇರಿ, ಗೂಳಪ್ಪ ಶಿವಪ್ಪ ಮುಶೀಗೇರಿ ಈ ಎಂಟೂ ಜನರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಈಗಾಗಲೇ ಈ ಪ್ರಕರಣದಡಿ 8 ಜನರ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದ್ದು, ವಿರುಪಾಕ್ಷಪ್ಪ(ರಾಜು) ಗಂಗಾಧರಪ್ಪ ಮಾನ್ವಿ, ಮಹೇಶ ವೆಂಕಟೇಶ ದಾಸರ, ಉಷಾ ಮಹೇಶ ದಾಸರ, ಅನಿಲ(ಶಿದ್ದಲಿಂಗಪ್ಪ) ಮಲ್ಲಪ್ಪ ಅಬ್ಬಿಗೇರಿ ಅವರು ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ರೀಯಲ್ ಎಸ್ಟೇಟ್ ಉದ್ಯಮಿ ಪಂಕಜ್ ರೂಪಚಂದ್ ಬಾಫಣಾ, ಶಿದ್ದಪ್ಪ ಮಲ್ಲಪ್ಪ ಮಾರನಬಸರಿ, ವೀರೇಶ ಷಣ್ಮುಖಪ್ಪ ಕುಂದಗೋಳ ಹಾಗೂ ಗೂಳಪ್ಪ ಶಿವಪ್ಪ ಮುಶೀಗೇರಿ ವಿರುದ್ಧ ದಸ್ತಗಿರ ವಾರಂಟ್ ಜಾರಿ ಮಾಡುವಂತೆ ನ್ಯಾಯಾಲಯಕ್ಕೆ ವಿನಂತಿಸಲಾಗಿದೆ.
*ಏನಿದು ಪ್ರಕರಣ..*
2023 ರ ಅಕ್ಟೋಬರ್ 25 ರಿಂದ 2024 ರ ಜುಲೈ 22 ರ ನಡುವಿನ ಅವಧಿಯಲ್ಲಿ ಗದಗ-ಬೆಟಗೇರಿ ಮಾಲೀಕತ್ವದ ಸಾವಿರಾರು ಕೋಟಿ ರೂ. ಮೌಲ್ಯದ 54 ವಕಾರಸಾಲುಗಳನ್ನು ಕಾನೂನು ಬಾಹಿರವಾಗಿ ದೀರ್ಘಾವಧಿಗೆ ಒಪ್ಪಂದ ಮಾಡಿಕೊಂಡು ಸುಳ್ಳು ಠರಾವು ಸೃಷ್ಟಿಸಿದ ಆರೋಪದಡಿ ನಗರಸಭೆ ಮಾಜಿ ಪ್ರಭಾರ ಪೌರಾಯಕ್ತ ಪ್ರಶಾಂತ ವರಗಪ್ಪನವರ ಅವರು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ 2024 ರ ಆ. 15 ರಂದು ದೂರು ದಾಖಲಿಸಿದ್ದರು.
2024 ರ ಫೆಬ್ರವರಿ 9 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ 2024 ರ ಜುಲೈ 22 ರಂದು ವಕಾರಸಾಲಿನ ಎಲ್ಲ ಅನುಭೋಗದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡೂ ದಾಖಲೆಗಳಿಗೆ ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಗದಗ-ಬೆಟಗೇರಿ ನಗರಸಭೆಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ ಆರೋಪದಡಿ ದೂರು ದಾಖಲಾಗಿತ್ತು.
ಈಗ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.