ಗದಗ:
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಗ್ರಾಮದ ಈಶಪ್ಪ ಶ್ಯಾನವಾಡ (54) ಮೃತ ರೈತರಾಗಿ ಗುರುತಾಗಿದ್ದಾರೆ. ಮೃತರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಮೇವುಂಡಿ ಶಾಖೆಯಿಂದ ಸುಮಾರು 12 ಲಕ್ಷ ರೂಪಾಯಿ ಬೆಳೆಸಾಲ ಪಡೆದಿದ್ದರು. ಆದರೆ, ಈ ಬಾರಿ ಬೆಳೆದ ಹೆಸರು ಮಳೆಗೆ ಸರ್ವನಾಶವಾಗಿದ್ದು, ರೈತ ಸಾಲದ ಸುಳಿಗೆ ಸಿಲುಕಿಕೊಂಡಿದ್ದರು.
ಮಳೆಯ ಕಾರಣದಿಂದ ಬೆಳೆ ಹಾನಿಯಾಗುತ್ತಿದ್ದಂತೆ ಸಾಲ ತೀರಿಸುವಲ್ಲಿ ಆಗಬಹುದಾದ ಅಸಮರ್ಥತೆ, ಆರ್ಥಿಕ ಸಂಕಷ್ಟ ಇವುಗಳಿಂದ ಮನನೊಂದು, ಜಮೀನಲ್ಲೇ ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸುತ್ತಿರುವ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟರು.
ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.