ಗದಗ ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ (VDST)ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಶ್ರೀನಿವಾಸ ಹುಯಿಲಗೋಳ ಅವರಿಗೆ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಹುಯಿಲಗೋಳ ಅವರು, ಶಿಕ್ಷಣ ಎನ್ನುವುದು ಕೇವಲ ಅಂಕಗಳಿಗೆ ಸೀಮಿತವಾಗಿರದೆ ಮೌಲ್ಯಗಳು, ಶಿಸ್ತು, ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಮಕ್ಕಳಲ್ಲಿ ಬೆಳೆಸುವ ಪವಿತ್ರ ಕಾರ್ಯವಾಗಿದ್ದು, ಈ ದೃಷ್ಟಿಕೋನವನ್ನು ನಮ್ಮ ಸಂಸ್ಥೆ ಸದಾ ಅಳವಡಿಸಿಕೊಂಡು ಬಂದಿದೆ ಎಂದು ಹೇಳಿದರು.
ಈ ಗೌರವವು ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಗುಣಮಟ್ಟದ, ಮೌಲ್ಯಾಧಾರಿತ ಹಾಗೂ ಸಮಗ್ರ ಶಿಕ್ಷಣ ನೀಡುವ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸುತ್ತೇವೆ ಎಂದರು. ಸಮಾಜದಲ್ಲಿ ಮಕ್ಕಳನ್ನು ಜವಾಬ್ದಾರಿಯುತರನ್ನಾಗಿ ರೂಪಿಸಿ, ದೇಶಪ್ರೇಮವನ್ನು ಬೆಳೆಸಿ, ಸ್ವಾವಲಂಬಿ ನಾಗರಿಕರನ್ನಾಗಿ ಮಾಡುವುದೇ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ ಅವರು, ಶ್ರೀ ಶ್ರೀನಿವಾಸ ಹುಯಿಲಗೋಳ ಅವರು ಅದೇ ಸಂಸ್ಥೆಯಲ್ಲಿ ಸತತ ೨೫ ವರ್ಷಗಳ ಕಾಲ ಕ್ರಿಯಾಶೀಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಅವರ ಪರಿಶ್ರಮ, ಅವಿರತ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಮೇಲಿನ ಬದ್ಧತೆಯನ್ನು ಗುರುತಿಸಿ ಸಂಸ್ಥೆಯ ಅಧ್ಯಕ್ಷ ಸ್ಥಾನವು ಅವರನ್ನು ಹುಡುಕಿಕೊಂಡು ಬಂದಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಹಿತವೇ ಪರಮ ಗುರಿಯೆಂದು ಭಾವಿಸಿ, ಶಿಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ನಿರಂತರವಾಗಿ ಹೆಚ್ಚಿಸುವಲ್ಲಿ ಅಧ್ಯಕ್ಷರ ಪಾತ್ರ ಅಮೂಲ್ಯವಾಗಿದೆ ಎಂದು ಶ್ಲಾಘಿಸಿದರು.
ಇಂತಹ ಮಹಾನ್ ವ್ಯಕ್ತಿತ್ವವನ್ನು ಹೊಂದಿದವರನ್ನು ಸನ್ಮಾನಿಸುವುದು ಕೇವಲ ವಿಧಿವಿಧಾನವಲ್ಲ; ಅದು ಅವರ ಸೇವೆಗೆ ಸಲ್ಲಿಸುವ ನಮ್ಮ ಕೃತಜ್ಞತೆಯ ಪ್ರತೀಕವಾಗಿದೆ. ಈ ಸನ್ಮಾನವು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಶಿಕ್ಷಣ ಸೇವೆ ಮುಂದುವರೆಸಲು ಅವರಿಗೆ ಶಕ್ತಿ ನೀಡಲಿ ಎಂಬುದು ನಮ್ಮ ಸದಾಶಯವಾಗಿದೆ ಎಂದು ಹೇಳಿದರು.
ಸನ್ಮಾನ ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿಪಿನ್ ಚಿಕ್ಕಟ್ಟಿ, ಶ್ರೀ ಸುದೀಂದ್ರ ಎಲ್. ಹುಯಿಲಗೋಳ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಪುಷ್ಪಲತಾ ಎಂ. ಬೇಲೆರಿ, ಪ್ರೊ. ಮುತ್ತು ಸುಣಗಾರ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಗುರುನಾಥ ಪೂಜಾರ ಉಪಸ್ಥಿತರಿದ್ದರು.
