ಗದಗ, ಆಗಸ್ಟ್ 5 – ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ಹಲವಾರು ಜಿಲ್ಲಾಡಳಿತಗಳು ತುರ್ತು ಕ್ರಮ ಕೈಗೊಂಡಿದ್ದು, ಖಾಸಗಿ ವಾಹನಗಳನ್ನೇ ರಸ್ತೆಗಿಳಿಸುವ ನಿಟ್ಟಿನಲ್ಲಿ ಈಗಾಗಲೇ ನಿರ್ಧಾರ ಕೈಗೊಂಡಿವೆ.
ವರದಿ:ಮಹಲಿಂಗೇಶ ಹಿರೇಮಠ.ಗದಗ
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ಖಾಸಗಿ ಶಾಲೆಗಳ ಬಸ್ಸುಗಳನ್ನೂ ಸಾರ್ವಜನಿಕ ಸಾರಿಗೆ ಸೇವೆಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಪತ್ರವೊಂದನ್ನು ರವಾನಿಸಿದ್ದು, ಷರತ್ತುಗಳೊಂದಿಗೆ ಒಪ್ಪಿಗೆ ಪತ್ರ ಕೋರಿದೆ.
ಪತ್ರದಲ್ಲಿ ಖಾಸಗಿ ಶಾಲೆಗಳ ಬಸ್ಸುಗಳನ್ನು ಶಾಲಾ ಸಮಯ ಹೊರತುಪಡಿಸಿ ಸಾರ್ವಜನಿಕರ ಸಾರಿಗೆ ಸೇವೆಗೆ ಬಳಸುವಂತೆ ಸೂಚಿಸಲಾಗಿದೆ. ಈ ಸೇವೆಗೆ ಬೇಕಾಗುವ ಡೀಸೆಲ್ ಖರ್ಚು, ಚಾಲಕರ ಭತ್ಯೆ ಹಾಗೂ ವಾಹನದ ಸುರಕ್ಷತೆಯ ಸಂಪೂರ್ಣ ಹೊಣೆಯನ್ನ ಶಿಕ್ಷಣ ಇಲಾಖೆ ವಹಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅದೇ ರೀತಿ, ವಾಹನದ ಸೇವೆಯ ಅವಧಿಯಲ್ಲಿ ಯಾವುದೇ ಅಪಘಾತ ಅಥವಾ ದುರಂತ ಉಂಟಾದರೆ, ಅದರ ನೇರ ಜವಾಬ್ದಾರಿ ಇಲಾಖೆಯೇ ಹೊಣೆ ಹೊರುವಂತೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ರೀತಿ ಬಿಸಿತುಪ್ಪದ ಆದೇಶದ ವಿರುದ್ಧ ಖಾಸಗಿ ಶಾಲೆಗಳಲ್ಲೀಗ ಆಕ್ರೋಶ ವ್ಯಕ್ತವಾಗಿದೆ. ‘ಸರ್ವಿಸ್ ಉಚಿತ, ಏನಾದರೂ ಆದರೆ ಮುಂದೆ ಅದರ ಹೊಣೆಗಾರಿಕೆ ನಿಭಾಯಿಸೋರಾರು?’ ಎನ್ನುವ ಪರಿಸ್ಥಿತಿಯಲ್ಲಿ ವಾಹನಗಳನ್ನು ಒದಗಿಸುವುದು ನ್ಯಾಯಸಮ್ಮತವಲ್ಲ ಎಂದು ಕೆಲವು ಶಾಲಾ ಆಡಳಿತ ಮಂಡಳಿಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ.
ಆದರೂ, ಜಿಲ್ಲಾಡಳಿತದ ಆದೇಶ ಹಾಗೂ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಹಲವು ಖಾಸಗಿ ಶಾಲೆಗಳು ತಮ್ಮ ಬಸ್ಸುಗಳನ್ನು ಸಾರ್ವಜನಿಕ ಸೇವೆಗೆ ನೀಡಲು ಮುಂದಾಗಿದ್ದು, ಕೆಲವೆಡೆ ಬಸ್ ನಿಲ್ದಾಣಗಳತ್ತ ಹಾಗೂ ಡಿಪೋಗಳತ್ತ ಖಾಸಗಿ ಶಾಲಾ ಬಸ್ಸುಗಳು ಎಂಟ್ರಿಕೊಡಲು ಸಜ್ಜಾಗಿವೆ.
ಸಾರ್ವಜನಿಕರು ಸಾರಿಗೆ ಸೌಲಭ್ಯಕ್ಕಾಗಿ ಖಾಸಗಿ ಶಾಲಾ ಬಸ್ಸುಗಳತ್ತ ನಿರೀಕ್ಷೆಯಿಂದ ನೋಡುವಂತಾಗಿದೆ. ಆದರೆ, ಈ ನಿಟ್ಟಿನಲ್ಲಿ ಉಂಟಾಗಬಹುದಾದ ಕಾನೂನು, ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಹೇಗೆ ನಿರ್ವಹಿಸಲಾಗುವುದು ಎಂಬುದೇ ಈಗಿನ ಪ್ರಮುಖ ಪ್ರಶ್ನೆ.ಅದೇನೆ ಇರಲಿ ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಶಾಲಾ ವಾಹನಗಳು ಬಸ್ ನಿಲ್ದಾಣದತ್ತ ಮುಖ ಮಾಡಿರುವದು ದುರಂತವೇ ಸರಿ…