ಸ್ಪ್ಯಾಮ್ ಮತ್ತು ಫಿಶಿಂಗ್ ಮೆಸೇಜ್ಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಟ್ರೇಸೆಬಿಲಿಟಿ ನಿಯಮಗಳನ್ನು ಟ್ರಾಯ್ ಇಂದಿನಿಂದ ಜಾರಿಗೊಳಿಸಲಿದೆ. ‘ಒಟಿಪಿಗಳೂ ಸೇರಿದಂತೆ ಎಲ್ಲ ವಾಣಿಜ್ಯ ಸಂದೇಶಗಳ ಮೂಲವನ್ನು ದೂರಸಂಪರ್ಕ ಕಂಪನಿಗಳು ಟ್ರ್ಯಾಕ್ ಮಾಡಲೇಬೇಕು. ವಂಚನೆಯಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ಇದರಿಂದ ಸಹಾಯವಾಗುತ್ತದೆ. ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವದರ ಮೂಲಕ ಬಳಕೆದಾರರನ್ನು ಹಗರಣಗಳಿಂದ, ವಂಚನೆಯಿಂದ ರಕ್ಷಿಸಬಹುದು’ ಎಂಬುದು ಟ್ರಾಯ್ನ ಉದ್ದೇಶವಾಗಿದೆ.
ಈ ನಿಯಮಗಳನ್ನು ಜಾರಿಗೆ ತರಲು ನ. 30ರ ಗಡುವನ್ನು ನೀಡಲಾಗಿತ್ತು. ಪಾಲಿಸದೇ ಇರುವ ಕಂಪನಿಗಳ ಮೆಸೇಜಿಂಗ್ ಸೇವೆಯಲ್ಲಿ ವ್ಯತ್ಯಯವಾಗಬಹುದು. ಒಟಿಪಿಗಳು ಸ್ಥಗಿತವಾಗಬಹುದು, ಇಲ್ಲವೆ ವಿಳಂಬವಾಗಬಹುದು. ಇದರಿಂದ ಬ್ಯಾಂಕಿಂಗ್, ಇ-ಕಾಮರ್ಸ್, ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ತೊಂದರೆ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆದರೆ ಈ ನಿಯಮಾವಳಿಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದ ಟ್ರಾಯ್, ಮೆಸೇಜಿಂಗ್ನಲ್ಲಿ ನಿರತವಾಗಿರುವ ಖಾಸಗಿ ವಾಣಿಜ್ಯ ಕಂಪನಿಗಳಿಗೆ ಪ್ರತಿದಿನವೂ ಎಚ್ಚರಿಸಲು ಅನುವಾಗುವಂತೆ ಸಾಕಷ್ಟು ಸಮಯವನ್ನೂ ದೂರಸಂಪರ್ಕ ಕಂಪನಿಗಳಿಗೆ ನೀಡಿತ್ತು. ಇದೀಗ ಆ ಗಡುವು ನಿನ್ನೆ ಶನಿವಾರಕ್ಕೆ ಅಂತ್ಯವಾಗಿದ್ದು, ಇಂದು ಭಾನುವಾರದಿಂದ ಹೊಸ ನಿಯಮ ಜಾರಿಯಾಗಲಿವೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಟ್ರಾಯ್, ಈ ನಿಯಮಗಳು ತಾತ್ಕಾಲಿಕವಾಗಿ ಒಟಿಪಿ ಸೇವೆಗಳ ಮೇಲೆ ಪರಿಣಾಮ ಬೀರಬಹುದಾದರೂ, ನಿಯಮಗಳು ಜಾರಿಗೆ ಬಂದ ಮೇಲೆ ಒಟಿಪಿ ಡೆಲಿವರಿಯಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಎಂದು ತಿಳಿಸಿದೆ.
ಮೊಬೈಲ್ ಫೋನ್ಗಳಿಗೆ ಬರುವ ಒನ್ ಟೈಮ್ ಪಾಸ್ವರ್ಡ್ಗಳು (ಒಟಿಪಿ) ಡಿಸೆಂಬರ್ 1ರಿಂದ ವಿಳಂಬವಾಗಿ ಡೆಲಿವರ್ ಆಗುತ್ತವೆ ಎಂಬ ವರದಿಗಳು ಆಧಾರರಹಿತ ಎಂದಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ‘ಮೆಸೇಜ್ಗಳ ಟ್ರೇಸೆಬಿಲಿಟಿಗಾಗಿ ಮತ್ತು ವಂಚನೆಗಳನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ಒಟಿಪಿಗಳು ತಡವಾಗಿ ಗ್ರಾಹಕರನ್ನು ತಲುಪಲಿವೆ ಎಂಬುದು ಕೇವಲ ಊಹಾಪೋಹ’ ಎಂದು ಸ್ಪಷ್ಟಪಡಿಸಿದೆ.