ಗಜೇಂದ್ರಗಡ: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪ್ರಸಿದ್ಧ ಕಾಲಕಾಲೇಶ್ವರ ಜಾತ್ರೆಯ ವೇಳೆ ದುರ್ಘಟನೆ ಸಂಭವಿಸಿದೆ. ಜಾತ್ರೆಗೆ ಆಗಮಿಸಿದ್ದ ಯುವಕನೊಬ್ಬ ಪುಷ್ಕರಣಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಪ್ಪ (22) ಎಂಬಾತನನ್ನು ಸಾವನ್ನಪ್ಪಿರುವ ಯುವಕನೆಂದು ಗುರುತಿಸಲಾಗಿದೆ. ನಿನ್ನೆ (ಶನಿವಾರ) ರಾತ್ರಿ ಕಾಲಕಾಲೇಶ್ವರ ದೇವಸ್ಥಾನದಲ್ಲಿ ನಡೆದ ರಥೋತ್ಸವದಲ್ಲಿ ಈತನೂ ಭಾಗವಹಿಸಿದ್ದ ಎನ್ನಲಾಗಿದೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇಂದು ಬೆಳಗ್ಗೆ ಪುಷ್ಕರಣಿಯಲ್ಲಿ ಸ್ನಾನ ಮಾಡಲು ಇಳಿದಾಗ ಶರಣಪ್ಪ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ. ಘಟನೆ ತಿಳಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಗಜೇಂದ್ರಗಡ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರ ನೆರವಿನಿಂದ ಶೋಧ ಕಾರ್ಯಾಚರಣೆ ನಡೆಸಿ ಇದೀಗ ಯುವಕನ ಮೃತದೇಹ ಹೊರಗೆ ತೆಗೆಯಲಾಗಿದೆ.
ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
