ಬೆಂಗಳೂರು, ಜೂನ್ 04: ಐಪಿಎಲ್ 2025ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ಸಿದ್ಧತೆ ಇದೆ.ಈ ಸಂದರ್ಭದಲ್ಲಿ , ಭೀಕರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಏಳು ಮಂದಿ ಈಗಾಗಲೇ ಅಭಿಮಾನಿಗಳು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ 11 ಜನರ ಸಾವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಹಸ್ರಾರು ಅಭಿಮಾನಿಗಳು ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮವನ್ನು ಸಹಭಾಗಿಯಾಗಿ ಅನುಭವಿಸಲು ಕ್ರೀಡಾಂಗಣದ ಬಳಿ ಸೇರಿದ್ದರು. ಹೆಚ್ಚಿನ ಜನಜಾತ್ರೆ ಕಾರಣದಿಂದಾಗಿ ಗೇಟ್ ನಂಬರ್ 6 ರಲ್ಲಿ ಭಾರಿ ನೂಕುನುಗ್ಗಲು ಉಂಟಾಗಿ ಕೆಲವರು ಬಿದ್ದು ಕಾಲ್ತುಳಿತಕ್ಕೆ ಒಳಗಾದರು. ಸ್ಥಳದಲ್ಲಿ ತಕ್ಷಣ ಅಂಬ್ಯುಲೆನ್ಸ್ ಇಲ್ಲದ ಹಿನ್ನೆಲೆ, ಆರು ಮಂದಿ ಮೃತಪಟ್ಟಿದ್ದು, ಪತ್ತೆಯಾದವರಲ್ಲಿ ಒಬ್ಬರು ಮಹಿಳೆ ಇದ್ದಾರೆ. ಇದಲ್ಲದೆ, 15 ಕ್ಕೂ ಹೆಚ್ಚು ಅಭಿಮಾನಿಗಳು ಅಸ್ವಸ್ಥರಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಅಸ್ವಸ್ಥರಾದವರನ್ನು ಶಿವಾಜಿನಗರದ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಹೃದಯವಿದ್ರಾವಕ ದೃಶ್ಯವನ್ನ ಮೂಡಿಸಿದೆ.
ಹೆಚ್ಚು ಜನಗಳು ಸೇರಿದ್ದರಿಂದ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನೂಕುನುಗ್ಗಲಿನಲ್ಲಿ ಹಲವು ಅಭಿಮಾನಿಗಳಿಗೆ ಗಂಭೀರ ಗಾಯಗಳಾಗಿದ್ದು, ಕೆಲವರನ್ನು ಪೊಲೀಸರು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅದೇ ವೇಳೆ ಗೇಟ್ ನಂಬರ್ 12 ಬಳಿ ಮತ್ತೊಂದು ಘಟನೆಯು ಸಂಭವಿಸಿದೆ – ಮಹಿಳಾ ಅಭಿಮಾನಿಯೊಬ್ಬರು ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೆಯೇ, ಟ್ರಾಫಿಕ್ ನಿಯಂತ್ರಣಕ್ಕಾಗಿ ಇಟ್ಟ ಬ್ಯಾರಿಕೇಡ್ ಒಂದರ ಪತನದಿಂದ ಮೂವರ ಕಾಲು ಮುರಿದಿರುವ ಘಟನೆ ಕೂಡ ವರದಿಯಾಗಿದೆ.
ಈ ದುರ್ಘಟನೆ ವಿಜೃಂಭಿತವಾಗಿ ಆಚರಿಸಬೇಕಾದ ವಿಜಯೋತ್ಸವವನ್ನು ದುಃಖದ ನೆರಳಿಗೆ ತರುವಂತಹ ದುರಂತವಾಗಿದೆ.
ಮುಂದಾಲೋಚನೆ, ಮುಂಜಾಗೃತೆ ಹಾಗೂ ಅಭಿಮಾನಿಗಳ ಭಾರಿ ಸಂಖ್ಯೆಗೆ ತಕ್ಕಂತೆ ಮುಂಚಿತ ವ್ಯವಸ್ಥೆ ಸರ್ಕಾರದಿಂದ ಕಲ್ಪಿಸಲಾಗಿತ್ತೇ?
ಸಹಸ್ರಾರು ಅಭಿಮಾನಿಗಳು ವಿಜಯೋತ್ಸವದ ಸಂದರ್ಭದಲ್ಲಿ ಸೇರಿ ಹೋಗುವುದನ್ನು ಅಧಿಕಾರಿಗಳು ನಿರೀಕ್ಷಿಸಬಹುದಾಗಿತ್ತು. ಹೀಗಿರುವಾಗಲೂ, ಭದ್ರತೆ, ಗೇಟ್ ವ್ಯವಸ್ಥೆ, ವಾಹನ ಸಂಚಾರ ನಿಯಂತ್ರಣ, ತುರ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಸೇರಿದಂತೆ ಹಲವಾರು ಮೂಲಭೂತ ವ್ಯವಸ್ಥೆಗಳು ವಿಫಲಗೊಂಡಂತಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಬೃಹತ್ ಸಮಾರಂಭಗಳಿಗೆ ಮುಂಚಿತವಾಗಿ ಸೂಕ್ತ ಯೋಜನೆ, ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಯ ಪೂರ್ಣ ಸಿದ್ಧತೆ, ಜನದಟ್ಟಣೆ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನ ಬಳಕೆ ಇತ್ಯಾದಿ ಅಂಶಗಳು ಅಗತ್ಯವಾಗಿವೆ. ಆದರೆ ಈ ಘಟನೆಯು ಈ ಎಲ್ಲಾ ಬಗ್ಗೆಯೂ ಲೋಪ ಉಂಟಾದಂತೆ ತೋರುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ನಗರ ಆಡಳಿತದಿಂದ ಈ ದುರಂತದ ಹೊಣೆವಹಿಸುವ ಬಗ್ಗೆ ಸ್ಪಷ್ಟನೆ ದೊರಕಬೇಕೆಂದು ಜನತೆ ಆಗ್ರಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಪುನರಾವೃತವಾಗದಂತೆ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.