ಗದಗ: 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಭೂಮಿ ಸಿದ್ಧಪಡಿಸಿ ಹದಗೊಳಿಸಲು ಜಿಲ್ಲೆಯ ಎಲ್ಲಾ ರೈತರು ಮಾಗಿ ಉಳುಮೆ ಕೈಗೊಳ್ಳಬೇಕು. ಮಣ್ಣಿನ ಸವಕಳಿಯನ್ನು ತಪ್ಪಿಸಲು ಹಾಗೂ ನೀರಿನ ಹರಿಯುವಿಕೆಯನ್ನು ಕಡಿಮೆ ಮಾಡಲು ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಾಣವನ್ನು ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿ ಕೈಗೊಳ್ಳುವುದು.
ಹಿಂಗಾರು ಬೆಳೆ ಮಾತ್ರ ಬೆಳೆಯಬೇಕೆಂದಿರುವ ಜಮೀನಿನಲ್ಲಿ ಇಳುಕಲಿಗೆ ಅಡ್ಡವಾಗಿ ರೆಂಟೆ ಹೊಡೆದು ಇಲ್ಲವೇ ಚೌಕು ಮಡಿಗಳನ್ನು ಮಾಡುವುದರಿಂದ ಮಣ್ಣಿನಲ್ಲಿ ನೀರಿನ/ತೇವಾಂಶದ ಸಂಗ್ರಹ ಹೆಚ್ಚಾಗಿ, ಹಿಂಗಾರು ಬೆಳೆಗಳ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುವುದು.

ಹಿಂದಿನ ಹಂಗಾಮಿನ ಬೆಳೆಗಳ ಉಳಿಕೆಗಳನ್ನು ಸುಡಬಾರದು.ಅವುಗಳನ್ನು ಕಾಂಪೋಸ್ಟ್ ಮಾಡಲು ಅಥವಾ ಎರೆಹುಳು ಗೊಬ್ಬರ ತಯಾರಿಸಲು ಉಪಯೋಗಿಸಬೇಕು. ಎರೆಹುಳು ತೊಟ್ಟಿಯಲ್ಲಿ ಕನಿಷ್ಟ ಶೇ.75 ತೇವಾಂಶ ಇರುವ ಹಾಗೆ ನೋಡಿಕೊಳ್ಳಬೇಕು. ದನ ಕರುಗಳಿಗೆ ಬಿಸಿಲಿನ ತಾಪದಿಂದ ರಕ್ಷಿಸಲು ಸಾಕಷ್ಟು ನೆರಳು ಹಾಗೂ ಕುಡಿಯಲು ನೀರು ಇರುವ ಹಾಗೆ ನೋಡಿಕೊಳ್ಳಬೇಕು.
ಜಿಲ್ಲೆಯ ಗದಗ ಹಾಗೂ ಮುಂಡರಗಿ ತಾಲೂಕುಗಳ ಕೆಲವೆಡೆ ಬೇಸಿಗೆಯಲ್ಲಿ ಸೂರ್ಯಕಾಂತಿ ಬಿತ್ತನೆ ಕೈಗೊಳ್ಳುವ ವಾಡಿಕೆಯಿದೆ. ಪ್ರಸ್ತುತ ಉಷ್ಣಾಂಶವು ಅಧಿಕ ಇರುವುದರಿಂದ ಹಾಗೂ ನೀರಿನ ಕೊರತೆ ಇರುವುದರಿಂದ ಸೂರ್ಯಕಾಂತಿ ಬೆಳವಣಿಗೆ ಕುಂಠಿತವಾಗುತ್ತದೆ, ಮತ್ತು ಕೀಟ ಮತ್ತು ರೋಗ ಬಾಧೆ ಹೆಚ್ಚಾಗುವ ಸಾಧ್ಯತೆಯಿದೆ. ಸೂರ್ಯಕಾಂತಿ ಬಿತ್ತನೆ ಮಾಡಬಾರದೆಂದು ರೈತರಲ್ಲಿ ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.