ಗದಗ / ಬೆಂಗಳೂರು:
ಗುತ್ತಿಗೆದಾರನಿಂದ ಕಮಿಷನ್ ಪಡೆದ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 9 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ನಿನ್ನೆ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕ ಚಂದ್ರು ಲಮಾಣಿ ಅವರಿಗೆ ಸೇರಿದ ಬಾಲಾಜಿ ಆಸ್ಪತ್ರೆಯಲ್ಲಿ ನಡೆದ ಲೋಕಾಯುಕ್ತ ದಾಳಿಯ ಬಳಿಕ, ಶಾಸಕರನ್ನು ಸತತ 11 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ನಂತರ ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಜಡ್ಜ್ ನಿವಾಸದಲ್ಲೇ ಶಾಸಕರನ್ನು ಸುಧೀರ್ಘವಾಗಿ ವಿಚಾರಣೆ ನಡೆಸಿದರು.
ಇದೇ ವೇಳೆ ಶಾಸಕರ ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ ಹಾಗೂ ಗುರು ಲಮಾಣಿ ಅವರನ್ನು ಸಹ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ಬಳಿಕ, ನ್ಯಾಯಾಲಯವು ಶಾಸಕ ಡಾ.ಚಂದ್ರು ಲಮಾಣಿ ಅವರಿಗೆ ಮಾರ್ಚ್ 2 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಈ ಹಿನ್ನೆಲೆ, ಶಾಸಕರು ಮುಂದಿನ ಒಂಬತ್ತು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ನ್ಯಾಯಾಂಗ ಬಂಧನದ ಆದೇಶ ಹೊರಬೀಳುತ್ತಿದ್ದಂತೆ, ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶಾಸಕ ಚಂದ್ರು ಲಮಾಣಿ ಸೇರಿದಂತೆ ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ ಹಾಗೂ ಗುರು ಲಮಾಣಿ – ಈ ಮೂವರನ್ನೂ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಪರಪ್ಪನ ಅಗ್ರಹಾರ ಜೈಲಿಗೆ ದಾಖಲಿಸಿದರು.
ಗುತ್ತಿಗೆದಾರರಿಂದ ಲಂಚ ಪಡೆದ ಆರೋಪ, ಮಧ್ಯವರ್ತಿಗಳ ಪಾತ್ರ, ಹಣದ ವ್ಯವಹಾರದ ಮೂಲ ಸೇರಿದಂತೆ ಹಲವು ಅಂಶಗಳ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಿನ್ನೆ ನಡೆದ ಲೋಕಾಯುಕ್ತ ದಾಳಿ ಹಾಗೂ ಇಂದು ಹೊರಬಂದ ನ್ಯಾಯಾಲಯದ ಆದೇಶ, ಗದಗ ಜಿಲ್ಲೆ ಮಾತ್ರವಲ್ಲದೆ ರಾಜ್ಯ ರಾಜಕೀಯ ವಲಯದಲ್ಲಿಯೂ ಭಾರೀ ಸಂಚಲನ ಮೂಡಿಸಿದೆ.
ಒಟ್ಟಾರೆ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧದ ಲೋಕಾಯುಕ್ತ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಮುಂದಿನ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
