ಗದಗ:ಗದಗ ಬೆಟಗೇರಿ ನಗರಸಭೆಯ ಎರಡನೇ ಅವಧಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ನಡೆಯಬೇಕಾಗಿದ್ದ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಂತಾಗಿದೆ.
ಹೌದು, ನಗರಸಭೆ ಎರಡನೇ ಅವಧಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರೆ, ಇತ್ತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಸದಸ್ಯರು ನಗರಸಭೆ ಆಡಳಿತ ಚುಕ್ಕಾಣಿಯನ್ನ ಹೇಗಾದರೂ ಮಾಡಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಈ ಪ್ರಕ್ರಿಯೆ ಕಾನೂನು ಸಚಿವ ಹೆಚ್.ಕೆ.ಪಾಟೀಲರ ತವರು ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ವಕಾರು ಸಾಲು ಲೀಸ್ ಅವಧಿ ವಿಸ್ತರಣೆ ಸಂಬಂಧ ನಕಲಿ ಠರಾವು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅಮಾನತ್ತು ಸಹ ಮಾಡಲಾಗಿತ್ತು.

ನಂತರ ಧಾರವಾಡ ವಿಭಾಗೀಯ ಹೈಕೋರ್ಟ್ ಪೀಠ ಮೂವರು ಸದಸ್ಯರ ಸದಸ್ಯತ್ವವನ್ನ ರದ್ದು ಮಾಡಿದ್ದನ್ನ ತೆಗೆದು ಹಾಕಿತ್ತು. ಆದರೆ ಸದಸ್ವತ್ವ ಮರಳಿ ಸಿಕ್ಕರೂ ನಾಳೆ ನಡೆಯುವ ಚುನಾವಣೆಯಲ್ಲಿ ಮೂವರೂ ಸದಸ್ಯರು ಮತದಾನ ಮಾಡುವಂತೆ ಆದೇಶಿಸಿದ್ದಿಲ್ಲ.ಇದು ನಾಳೆ ನಡೆಯುವ ಚುನಾವಣೆಯತ್ತ ಎಲ್ಲರ ಚಿತ್ತ ಹರಿಸುವಂತೆ ಮಾಡಿತ್ತು.
ಇದನ್ನು ಪ್ರಶ್ನಿಸಿ ಪುನಃ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ಸದಸ್ಯರಿಗೆ ಇದೀಗ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾನಕ್ಕೆ ಹೈಕೋರ್ಟ ಅವಕಾಶ ನಿಡಿದೆ. ಇದರಿಂದ ನಗರಸಭೆಯಲ್ಲಿ ಮೊದಲಿದ್ದ ಬಿಜೆಪಿ ಸದಸ್ಯರ ಬಹಮತ ಹಾಗೆ ಉಳಿದಂತಾಗಿದ್ದು, ನಾಳೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕಾಗಿದೆ.
ಇನ್ನು ಮೂವರು ಸದಸ್ಯರ ಸದಸ್ಯತ್ವ ಮರಳಿ ಸಿಕ್ಕರೂ, ಅದು ಎಲ್ಲಿಯವರೆಗೆ ಮುಂದುವರಿಯಲಿದೆ ಅನ್ನುವ ಸ್ಪಷ್ಟಚಿತ್ರಣ ಈವರೆಗೂ ಸಿಕ್ಕಿಲ್ಲ. ಕಾರಣ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಈ ವಿಚಾರಣೆ ಇನ್ನೂ ಬಾಕಿಯಿದೆ.
ಆದರೆ ನಾಳೆ ಚುನಾವಣೆ ನಡೆದು ಬಹುಮತಗಳ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಆಯ್ಕೆಯಾಗುವ ತನಕ ಏನನ್ನೂ ತಳ್ಳಿ ಹಾಕುವಂತಿಲ್ಲ. ಅಧಿಕಾರಕ್ಕಾಗಿ ಎರೆಡೂ ಪಕ್ಷಗಳ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸದ್ಯ ನಾಳೆ ಚುನಾವಣೆಯತ್ತ ಎಲ್ಲರ ಗಮನ ನೆಟ್ಟಿದೆ.