ಗದಗ:ವಕಾರುಸಾಲು ಅವಧಿ ವಿಸ್ತರಣೆ ಕುರಿತಂತೆ ನಕಲಿ ಠರಾವು ಸೃಷ್ಟಿಸಿದ ಆರೋಪ ಸಾಬಿತಾದ ಹಿನ್ನೆಲೆ ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಬಿಜೆಪಿ ಮೂವರು ಸದಸ್ಯರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. ನಗರಸಭೆ ಮಾಜಿ ಅಧ್ಯೆಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ ಹಾಗೂ ಗೊಳಪ್ಪ ಮುಷೀಗೇರಿ ಅವರನ್ನು ಅಮಾನತ್ತು ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಸಲ್ಲಿಸಿದ ಪ್ರಸ್ತಾವನೆ ಆಧರಿಸಿ ಫೆ. 13 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಅವರ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ, ಫೆ.9, 2024 ರಂದು ನಡೆದ ಸಾಮಾನ್ಯ ಸಭೆಯಲ್ಲಿ 54 ವಕಾರು ಸಾಲು 5 ವರ್ಷಕ್ಕೆ ಲೀಸ್ ನೀಡಿದ್ದ ಠರಾವು ಸಂಖ್ಯೆ 378 ನಕಲಿ ಠರಾವು ಎಂದು ದೃಢಪಟ್ಟಿದೆ.

ನಕಲಿ ಠರಾವು ದಾಖಲೆಗಳಲ್ಲಿ ಆರೋಪಿತರು ಸಹಿ ಮಾಡಿರುವುದು ಪ್ರಮುಖ ಆರೋಪವಾಗಿದೆ. ಹೈಕೋರ್ಟ್ಗೆ ಆರೋಪಿತರು ಸಲ್ಲಿಸಿದ ಮೇಲ್ಮನವಿ ಅರ್ಜಿ ಕೂಡ ತೀರಸ್ಕೃತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ವೇಳೆ ಅಪಾದಿತರು ಎಲ್ಲ ಅಂಶಗಳನ್ನು ಒಪ್ಪಿಕೊಂಡಿರುವ ಹಿನ್ನೆಲೆ ಪ್ರಕರಣದಲ್ಲಿ ಆರೋಪ ಸಾಬಿತಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪೌರಸಭೆ ಅಧಿನಿಯಮ 1964ರ 41(1)(2) ಅಡಿಯಲ್ಲಿ ಸದಸ್ಯತ್ವ ಸ್ಥಾನದಿಂದ ಅಮಾನತ್ತು ಮಾಡಲು ಆದೇಶ ನೀಡಲಾಗಿದೆ.
ಪ್ರಾದೇಶಿಕ ಆಯುಕ್ತರ ಅಮಾನತ್ತು ಆದೇಶದ ವಿರುದ್ಧ ಹೈಕೋರ್ಟ ಮೆಟ್ಟಿಲೇರಲು ಅನರ್ಹಗೊಂಡ ಸದಸ್ಯರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
“ಪ್ರಾದೇಶಿಕ ಆಯುಕ್ತರ ಅಮಾನತ್ತು ಆದೇಶ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಕಾನೂನು ಗಾಳಿಗೆ ತೂರಿ ನಮ್ಮನ್ನು ಅಮಾನತ್ತು ಮಾಡಲಾಗಿದೆ.”
ಉಷಾ ದಾಸರ, ನಗರಸಭೆ ಸದಸ್ಯೆ
“ಆದೇಶ ಪ್ರತಿ ತಲುಪಿದೆ. ಮುಂದಿನ ಪ್ರಕ್ರಿಯೆನ್ನು ಸೋಮವಾರ ಕೈಗೊಳ್ಳಲಾಗುವುದು.”
ಸಿ.ಎನ್. ಶ್ರೀಧರ, ಜಿಲ್ಲಾಧಿಕಾರಿ