ಗದಗ: ಗದಗ ನಗರದಲ್ಲಿ ಇಂದು ಖಾಸಗಿ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಗರದ ನೀರೀಕ್ಷಣಾ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಅವರು ಸ್ಪಷ್ಟಪಡಿಸಿದರು. ವಿಶೇಷವಾಗಿ ಜಾತಿಗಣತಿ, ಹಿಂದುಳಿದ ವರ್ಗಗಳ ಸಮೀಕ್ಷೆ, ರಾಜ್ಯಪಾಲರ ಪತ್ರ, ಬೆಳೆಹಾನಿ, ರಸ್ತೆಗುಂಡಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಗ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಜಾತಿಗಣತಿ ವಿಚಾರವಾಗಿ
ಮಾಧ್ಯಮದವರು “ಉಪಜಾತಿಗಳ ಎದುರು ಕ್ರಿಶ್ಚಿಯನ್ ಪದ ಬಳಕೆಯಾಗಿದೆ” ಎಂಬ ಪ್ರಶ್ನೆ ಕೇಳಿದಾಗ ಸಿಎಂ ಸಿದ್ಧರಾಮಯ್ಯ ಉತ್ತರಿಸುತ್ತಾ – “ಅದು ಎಲ್ಲವನ್ನೂ ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. ಯಾವುದು ಅನಗತ್ಯವೋ ಅದನ್ನು ತೆಗೆದು ಹಾಕಲಾಗುತ್ತದೆ, ಅಗತ್ಯವಾದದ್ದು ಉಳಿಸಲಾಗುತ್ತದೆ. ಈಗಾಗಲೇ ಒಂದು ಲಕ್ಷ 20 ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರು 120 ರಿಂದ 150 ಮನೆಗಳಿಗೆ ಹೋಗಿ, 15 ದಿನಗಳ ಕಾಲ ಸಮೀಕ್ಷೆ ನಡೆಸುತ್ತಾರೆ. ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುತ್ತಾರೆ. ಇದರಿಂದ ಯಾರ್ಯಾರು ಯಾವ ಜಾತಿಗೆ ಸೇರಿದ್ದಾರೆ, ಯಾರು ಅವಕಾಶ ವಂಚಿತರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಸರ್ಕಾರ ಅವರಿಗೆ ಮೊದಲ ಆದ್ಯತೆ ನೀಡಲು ಈ ಸಮೀಕ್ಷೆ ನೆರವಾಗಲಿದೆ. ಇದು ಯಾವ ಜಾತಿಗಣತಿ ಅಲ್ಲ, ಇದು ಕೇವಲ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾತ್ರ” ಎಂದು ವಿವರಿಸಿದರು.
ಷಡ್ಯಂತ್ರ ಆರೋಪಕ್ಕೆ ಉತ್ತರ..
ಜಾತಿ ಸಮೀಕ್ಷೆಯ ಹಿಂದೆ ಷಡ್ಯಂತ್ರ ಇದೆ ಎನ್ನುವ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಿಎಂ – “ಕೇಂದ್ರ ಸರ್ಕಾರದವರೂ ಸಹ ಜಾತಿಗಣತಿ ಮಾಡಲು ಸಜ್ಜಾಗಿದ್ದಾರೆ. ಹಾಗಾದರೆ ಅವರ ಹಿಂದೆಯೂ ಷಡ್ಯಂತ್ರ ಇದೆಯೆ? 1931ರಲ್ಲಿ ಜಾತಿಗಣತಿ ನಿಲ್ಲಿಸಲ್ಪಟ್ಟಿತ್ತು. ಆದರೆ ಈಗ ಕೇಂದ್ರವೇ ಪುನಃ ಅದನ್ನು ಕೈಗೆತ್ತಿಕೊಳ್ಳುತ್ತಿದೆ. ಹೀಗಿರುವಾಗ ಇದು ಷಡ್ಯಂತ್ರ ಎನ್ನುವುದು ತರ್ಕವಲ್ಲ. ಆರಂಭವಾಗಲಿ ಅಥವಾ ಆಗದಿರಲಿ, 2028ಲ್ಲಿ ಜಾತಿಗಣತಿ ಆಗುತ್ತಲ್ವಾ, ಅಲ್ಲಿಯೂ ಷಡ್ಯಂತ್ರ ಇದೆನಾ ಹಾಗಾದ್ರೆ” ಎಂದು ಸ್ಪಷ್ಟನೆ ನೀಡಿದರು.
ಲಿಂಗಾಯತ ಶಾಸಕರ ಬೆಂಬಲ
ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವುದಾಗಿ ಕೆಲವರು ಪ್ರಚಾರ ಮಾಡುತ್ತಿರುವ ಬಗ್ಗೆ ಮಾತನಾಡಿದ ಸಿಎಂ – “ಯಾವುದೇ ಲಿಂಗಾಯತ ಶಾಸಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಬೇಕು. ಯಾರು ಬಡವರು, ಯಾರು ಅವಕಾಶದಿಂದ ವಂಚಿತರಾಗಿದ್ದಾರೆ, ಅವರಿಗೆ ಅವಕಾಶ ನೀಡುವುದೇ ಈ ಸಮೀಕ್ಷೆಯ ಉದ್ದೇಶ” ಎಂದು ಹೇಳಿದರು.
ಜಾತಿ ಮಾಹಿತಿ ಕಲೆಹಾಕುವ ಆರೋಪಕ್ಕೆ ಪ್ರತಿಕ್ರಿಯೆ
ಸಮೀಕ್ಷೆ ಹೆಸರಲ್ಲಿ ಜಾತಿ ಮಾಹಿತಿ ಕಲೆಹಾಕಲಾಗುತ್ತಿದೆ ಎನ್ನುವ ಆರೋಪಕ್ಕೂ ಉತ್ತರಿಸಿದ ಅವರು – “ಸಮೀಕ್ಷೆ ಮಾಡಿದಾಗ ಅದು ಸಹಜವಾಗಿಯೇ ಬರುತ್ತದೆ. ಸಮೀಕ್ಷಾಧಿಕಾರಿ ಮನೆಗೆ ಬಂದಾಗ ಯಾವ ಜಾತಿ, ಧರ್ಮ ಎಂದು ಕೇಳುತ್ತಾರೆ. ಆಗ ಸಹಜವಾಗಿ ಉತ್ತರ ನೀಡುತ್ತೀರಿ. ಹೀಗಾಗಿ ಜಾತಿ ಮಾಹಿತಿ ಸೇರುತ್ತದೆ. ಇದು ಅನಿವಾರ್ಯ, ಇದರಲ್ಲಿ ಯಾವುದೇ ಗುಪ್ತ ಉದ್ದೇಶವಿಲ್ಲ” ಎಂದು ಆರೋಪ ತಳ್ಳಿಹಾಕಿದರು.
ರಾಜ್ಯಪಾಲರ ಪತ್ರದ ಕುರಿತಾಗಿ
ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ – “ಅದು ಬಿಜೆಪಿ ನಾಯಕರು ಬರೆದ ಪತ್ರ. ರಾಜ್ಯಪಾಲರು ಅದನ್ನು ನಮಗೆ ಕಳುಹಿಸಿದ್ದಾರೆ ಅಷ್ಟೇ. ಇದು ರಾಜ್ಯಪಾಲರ ಅಭಿಪ್ರಾಯವಲ್ಲ. ಬಿಜೆಪಿಯವರು ಇದನ್ನೇ ರಾಜಕೀಯಗೊಳಿಸುತ್ತಿದ್ದಾರೆ. ಇಲ್ಲಿ ಯಾವ ಜಾತಿ ಒಡೆಯುವ ಪ್ರಶ್ನೆಯೂ ಇಲ್ಲ. ಇದು ಶುದ್ಧವಾಗಿ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ” ಎಂದು ತಿಳಿಸಿದರು.
ರಾಹುಲ್ ಗಾಂಧಿ ಕುರಿತು ಆರೋಪ ಸತ್ಯ
ಆಳಂದ ಉಪಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪದ ಕುರಿತಾಗಿ ಮಾತನಾಡಿದ ಅವರು – “ರಾಹುಲ್ ಗಾಂಧಿ ಹೇಳಿರುವುದು ಸತ್ಯ. ಯಾರಿಂದ ಮತಗಳ್ಳತನ ನಡೆದಿದೆ ಎಂಬುದನ್ನು ಆಪಾದಿತರಿಂದಲೇ ಹೇಳಿಸಲಾಗಿದೆ. ಇದರ ಬಗ್ಗೆ ವಿಶೇಷ ತನಿಖಾ ದಳ (SIT) ತನಿಖೆ ನಡೆಸಲಿದೆ” ಎಂದು ಖಚಿತಪಡಿಸಿದರು.
ಕುರುಬ ಸಮುದಾಯ – ಎಸ್ಟಿ ಶಿಫಾರಸು
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಶಿಫಾರಸ್ಸಿನ ವಿಚಾರದಲ್ಲಿ ಉತ್ತರಿಸಿದ ಸಿಎಂ – “ಬಿಜೆಪಿಯವರೇ, ಈಶ್ವರಪ್ಪ ಸೇರಿದಂತೆ ಹಲವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು. ಆದರೆ ಅದನ್ನು ಕೇಂದ್ರ ಸರ್ಕಾರವೇ ವಾಪಸ್ ಕಳುಹಿಸಿದೆ. ಎಸ್ಟಿಗೆ ಸೇರಿಸುವುದರ ಬಗ್ಗೆ ಅಂತಿಮ ತೀರ್ಮಾನ ಕೇಂದ್ರದ ಕೈಯಲ್ಲಿದೆ” ಎಂದು ಸ್ಪಷ್ಟಪಡಿಸಿದರು.
ಬೆಳೆಹಾನಿ ಪರಿಹಾರ
ರಾಜ್ಯದ ಹಲವು ಭಾಗಗಳಲ್ಲಿ ಮಳೆ-ಬರದಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ – “ಬೆಳೆಹಾನಿ ಕುರಿತು ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಪೂರ್ಣವಾದ ಬಳಿಕ ರೈತರಿಗೆ ಪರಿಹಾರ ನೀಡಲಾಗುವುದು. ಸರ್ಕಾರದ ಬಳಿ ಹಣದ ಕೊರತೆಯೇ ಇಲ್ಲ. ಇದೇ ಮಂಗಳವಾರಕ್ಕೆ ಗದಗ ಜಿಲ್ಲೆಯ ಸಮೀಕ್ಷೆ ಪೂರ್ಣಗೊಳ್ಳಲಿದೆ” ಎಂದು ಭರವಸೆ ನೀಡಿದರು.
ರಸ್ತೆಗುಂಡಿಗಳ ಸಮಸ್ಯೆ
ಗದಗ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆಗುಂಡಿಗಳ ಸಮಸ್ಯೆ ತೀವ್ರವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ – “ಸೆಪ್ಟೆಂಬರ್ 24ರಂದು ಬಿಜೆಪಿ ರಸ್ತೆಗುಂಡಿ ವಿರೋಧಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ. ಆದರೆ ಮಳೆಯ ಪರಿಣಾಮವಾಗಿ ರಸ್ತೆಗಳು ಹಾಳಾಗಿವೆ. ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ರಾಜ್ಯದ ಎಲ್ಲೆಡೆ ಹಾನಿಗೊಳಗಾದ ರಸ್ತೆಗಳನ್ನು ತಕ್ಷಣ ಸರಿಪಡಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದರು.
ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಸಿಎಂ
ಬಿಜೆಪಿಯವ್ರು ಅಧಿಕಾರದಲ್ಲಿದ್ದಾಗ ಒಂದೇ ಒಂದು ದಿನವೂ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಿಲ್ಲ. ಈಗ ನಮ್ಮ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಒಟ್ಟಾರೆ ಗದಗ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ಧರಾಮಯ್ಯ ಜಾತಿಗಣತಿ, ಸಮೀಕ್ಷೆ, ರಾಜ್ಯಪಾಲರ ಪತ್ರ, ಆಳಂದ ಮತಗಳ್ಳತನ, ಕುರುಬ ಸಮುದಾಯ ಎಸ್ಟಿ ಶಿಫಾರಸು, ಬೆಳೆಹಾನಿ ಪರಿಹಾರ, ರಸ್ತೆಗುಂಡಿ ದುರಸ್ತಿ ಸೇರಿದಂತೆ ಹಲವಾರು ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಸ್ಪಷ್ಟಪಡಿಸಿದರು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಯುತ್ತಿದೆ, ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಅವರು ಭರವಸೆ ನೀಡಿದರು.