ಮುಂಡರಗಿ: ಕಳ್ಳರಿದ್ದಾರೆ ಅಂತಾ ಎಚ್ಚರಿಕೆ ನೀಡಿದಂತೆ ಮಾಡಿ ವೃದ್ಧನಿಂದ ಚಿನ್ನದ ರಿಂಗ್ ಕಳ್ಳತನ ಮಾಡಿರೋ ಘಟನೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಿಂದ ಕೊಪ್ಪಳ ರಸ್ತೆಗೆ ಅಂಗಡಿಗೆಂದು ಕಾಶಪ್ಪ ಸತ್ಯಪ್ಪನವರ್ ಅನ್ನೋ ವೃದ್ಧರೊಬ್ಬರು ತೆರಳಿದ್ದಾರೆ. ಈ ವೇಳೆ ಕಾಶಪ್ಪ ಅವರನ್ನ ನೋಡಿ ಇಬ್ಬರು ಅನಾಮಿಕರು ಬೈಕ್ ನಿಲ್ಲಿಸಿ ಅವರ ಜೊತೆ ಮಾತನಾಡಿದ್ದಾರೆ. ಇತ್ತೀಚೆಗೆ ಕಳ್ಳತನ ಪ್ರಕರಣ ಜಾಸ್ತಿಯಾಗಿವೆ ಯಜಮಾನ್ರೆ, ಇಂಥಹ ಬೆಲೆಬಾಳುವ ಉಂಗುರ ಜೇಬಿನಲ್ಲಿಡಿ ಅಂತಾ ಹೇಳಿ, ಕಾಶಪ್ಪನವರನ್ನ ಖದೀಮರು ಯಾಮಾರಿಸಿದ್ದಾರೆ.

ಬಳಿಕ ಕಾಶಪ್ಪನವರ ಕೈ ಬೆರಳುಗಳಲ್ಲಿದ್ದ ಉಂಗುರ ಬಿಚ್ಚಿ ತಮ್ಮ ಬಳಿ ಇದ್ದ ಪೇಪರ್ ನಲ್ಲಿ ಸುತ್ತಿ ಕಾಶಪ್ಪನವರ ಜೇಬಿಗೆ ಇಟ್ಟಂತೆ ನಾಟಕ ಮಾಡಿದ್ದಾರೆ.ನಂತರ ಕಾಶಪ್ಪ ಮನೆಗೆ ಬಂದು ಪೇಪರ್ ಚೆಕ್ ಮಾಡಿದಾಗ ಅದರಲ್ಲಿ ಚಿನ್ನದ ಉಂಗುರ ಬದಲಾಗಿ ಕಲ್ಲು ಪತ್ತೆಯಾಗಿದೆ. ಚಾಲಾಕಿಗಳು ಪೇಪರ್ ನಲ್ಲಿ ಕಲ್ಲು ಸುತ್ತಿ ಕಿಸೆಗೆ ಹಾಕಿ, ತಾವು ರಿಂಗ್ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಮನೆಗೆ ಬಂದು ಕಲ್ಲು ನೋಡಿದ ಅಸಹಾಯಕ ಕಾಶಪ್ಪನರ ವೃದ್ಧ ದಂಪತಿ ಕಂಗಾಲಾಗಿದ್ದಾರೆ. ಅರ್ಧ ತೊಲೆ ಚಿನ್ನದ ಉಂಗುರ ಕಳ್ಳೆದುಕೊಂಡು ವೃದ್ಧ ಕಾಶಪ್ಪ ಅಸಹಾಯಕರಾಗಿದ್ದಾರೆ.
ಕಳೆದ ನಾಲ್ಕಾರು ದಿನಗಳ ಹಿಂದಷ್ಟೇ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಒಂದೇ ರಾತ್ರಿಯಲ್ಲಿ ಮೂರು ಗ್ರಾಮಗಳಲ್ಲಿ ಏಳು ಕಡೆ ಸರಣಿ ಕಳ್ಳತನ ನಡೆದಿದ್ದವು. ಆ ಘಟನೆ ಮಾಸುವ ಮುನ್ನವೇ ಇದೀಗ ಮುಂಡರಗಿ ಪಟ್ಟಣದಲ್ಲಿ ಹಾಡುಹಗಲೇ ಈ ಘಟನೆ ಜರುಗಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.