ಅಹಮದಾಬಾದ್, ಜೂನ್ 12:ಗುಜರಾತ್ನ ಅಹಮದಾಬಾದ್ ನಗರದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ವಿಮಾನ ದುರಂತದಿಂದ ದಟ್ಟ ಹೊಗೆ ಆವರಿಸಿದ್ದು, ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಪ್ರಯಾಣ ಹೊರಟ್ಟಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಕರು ಇದ್ದು, ಹಲವು ಮಂದಿ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು, ಅಗ್ನಿಶಾಮಕ ದಳಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.
ವಿಮಾನ ಪತನಗೊಂಡ ಸ್ಥಳವು ವಿಮಾನ ನಿಲ್ದಾಣದ ಹತ್ತಿರದ ಮೇಘನಿ ನಗರ ಎಂಬ ವಸತಿ ಪ್ರದೇಶವಾಗಿದ್ದು, ಸ್ಥಳೀಯ ನಿವಾಸಿಗಳು ಭೀತಿಯಿಂದ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೆ ಹೋಗಿದ್ದಾರೆ. ಘಟನೆ ನಡೆದ ಬಳಿಕ ವಿಮಾನ ನಿಲ್ದಾಣದ ಆವರಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.
ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ:
ಸದ್ಯಕ್ಕೆ ಈ ದುರ್ಘಟನೆಯಲ್ಲಿಯು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾವುನೋವುಗಳ ಭೀತಿ ತೀವ್ರವಾಗಿದೆ. ವಿಮಾನ ಪತನಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಸ್ಥಳದಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ:
ರಕ್ಷಣಾ ಪಡೆಗಳು, ಅಗ್ನಿಶಾಮಕ ದಳ, ತುರ್ತು ಸೇವಾ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ತುರ್ತು ಘಟಕಗಳು ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆಯಲ್ಲಿ ತೊಡಗಿವೆ. ವಿಮಾನದ ಒಳಗಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ರಕ್ಷಿಸಲು ಹೋರಾಟ ಮುಂದುವರೆದಿದೆ.