ಚಾಮರಾಜನಗರ: ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಚಾಲನೆ ಮಾಡಿ ಎಡವಟ್ಟು ಮಾಡಿದ್ದ ಶಿಕ್ಷಕನನ್ನ ಅಮಾನತು ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೀರಭದ್ರಸ್ವಾಮಿ ಬಸ್ ಚಾಲನೆ ಮಾಡಿ ಎಡವಟ್ಟು ಮಾಡಿಕೊಂಡಿದ್ದರು.ಹೊಸ ವರ್ಷಾಚರಣೆ ವೇಳೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದಾಗ ತಾವೇ ಡ್ರೈವರ್ ಸೀಟ್ ನಲ್ಲಿ ಕೂತು ಬಸ್ ಚಲಾಯಿಸಿದ್ದರು.ತಮ್ಮ ಸುತ್ತಲೂ ವಿದ್ಯಾರ್ಥಿಗಳನ್ನು ನಿಲ್ಲಿಸಿಕೊಂಡು ಡ್ರೈವಿಂಗ್ ಮಾಡುತ್ತಾ ವಿದ್ಯಾರ್ಥಿಗಳಿಂದ ತಮ್ಮ ಡ್ರೈವಿಂಗ್ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆ ಹಿಡಿಸಿದ್ದರು.

ವಿದ್ಯಾರ್ಥಿಗಳು ತೆಗೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.ಶೈಕ್ಷಣಿಕ ಪ್ರವಾಸದಲ್ಲಿ ಶಾಲಾ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡಿದ್ದ ಶಿಕ್ಷಕನಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.ಚಾಲಕನನ್ನು ಇಳಿಸಿ ಬಸ್ ಡ್ರೈವ್ ಮಾಡಿ ಹೀರೋಹಿಸಂ ತೋರಿದ್ದ ಶಿಕ್ಷಕನ ಈ ಘಟನೆ ಕುರಿತಂತೆ ಬಿಇಒಗೆ ಶಿಕ್ಷಣ ಇಲಾಖೆ ಡಿಡಿ ರಾಮಚಂದ್ರ ರಾಜೇ ಅರಸ್ ವರದಿ ಕೊಡುವಂತೆ ಕೇಳಿದ್ದರು.
ಶಿಕ್ಷಕನ ಚೆಲ್ಲಾಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ ಅನ್ನೋಹಾಗೆ,ಸ್ವಲ್ಪ ಯಮಾರಿದರೂ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಕುಟುಂಬಕ್ಕೆ ಕಂಟಕ ಎದುರಾಗುತ್ತಿತ್ತು. ಹೀಗಾಗಿ ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಇದೀಗ ಶಿಕ್ಷಕ ವೀರಭದ್ರಸ್ವಾಮಿ ಅವರನ್ನ ಅಮಾನತು ಶಿಕ್ಷಣ ಡಿಡಿ ಆದೇಶ ಹೊರಡಿಸಿದ್ದಾರೆ.