ಗದಗ: ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ಮಹಾದೇವಕ್ಕ ಭಾವನೂರ(55) ಎಂಬ ಮಹಿಳೆ ಕಾಲ್ತುಳಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ಬೆಳಗಾವಿಯಿಂದ ಹಲವು ಜನರು ಸೇರಿ ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ತೆರಳಿದ್ದರು.

ಈ ವೇಳೆ ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಕರ್ನಾಟಕದ ಬೆಳಗಾವಿ ಮೂಲದ ಒಟ್ಟು ನಾಲ್ಕು ಜನ ಮೃತಪಟ್ಟವರ ಪೈಕಿ ಸುಗನಹಳ್ಳಿ ಗ್ರಾಮದ ಒರ್ವ ಮಹಿಳೆ ಮಹಾದೇವಿ ಭಾವನೂರ ಸಹ ಒಬ್ಬರಾಗಿದ್ದಾರೆ.
ಮೂಲತಃ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದವರಾಗಿರೋ ಮಹಾದೇವಿ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗಂಡನ ಮನೆಯಾಗಿದೆ. ಪತಿ ಬೆಳಗಾವಿಯಲ್ಲೇ ಉದ್ಯೋಗ ಮಾಡುತ್ತಿದ್ದ ಹಿನ್ನೆಲೆ, ಸುಮಾರು ವರುಷಗಳಿಂದ ಅಲ್ಲಿಯೇ ವಾಸವಾಗಿದ್ದರು. ಸುಗನಹಳ್ಳಿಯಲ್ಲಿ ಪತಿಯ ಸಹೋದರರು, ಸೇರಿದಂತೆ ಜಮೀನು ಹೊಂದಿದ್ದಾರೆ.
ಮಹಾದೇವಿ ಅವರ ಮೃತ ದೇಹ ನಿನ್ನೆಯೇ ಫ್ಲೈಟ್ ಮೂಲಕ ಬೆಳಗಾವಿಗೆ ಆಗಮಿಸಿದ್ದು, ಅವರ ತವರೂರಾದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಮಹಾದೇವಿ ಅವರು ತಮ್ಮ ಇಬ್ಬರು ಪುತ್ರರು ಹಾಗೂ ಪತಿ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದು, ಸುಗನಹಳ್ಳಿ ಗ್ರಾಮದಲ್ಲಿ ಸೊಸೆ ಕಳೆದುಕೊಂಡ ಭಾವನೂರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸುಗನಹಳ್ಳಿ ಹಾಗೂ ನೂಲ್ವಿ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.