ಗದಗ, ಜುಲೈ 11:
ರಾಜ್ಯದೆಲ್ಲೆಡೆ ಯುವ ವಯಸ್ಸಿನವರಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವ ನಡುವೆಯೇ, ಗದಗದಲ್ಲಿ ಮತ್ತೊಂದು ದುಃಖದ ಘಟನೆ ವರದಿಯಾಗಿದೆ. ಗದಗ ತಾಲೂಕಿನ ಸೂರಟೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾ ಕಲ್ಮಠ (49) ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪ್ರಭಾ ಕಲ್ಮಠ ಅವರು ಗದಗ ನಗರದ ನಿವಾಸಿಯಾಗಿದ್ದು, ಇಂದು ಬೆಳಿಗ್ಗೆ ಕಾಲೇಜಿಗೆ ಹೋಗಲು ತಯಾರಾಗುತ್ತಿದ್ದರು. ಅಂದಿನಂತೆ ಮನೆಯಲ್ಲಿ ರಂಗೋಲಿ ಹಾಕುತ್ತಿದ್ದ ವೇಳೆ ಅಚಾನಕ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಕುಸಿದು ಬಿದ್ದಿದ್ದು, ಪತಿ ಹಾಗೂ ನೆರೆಹೊರೆಯವರ ಸಹಾಯದಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಯಲ್ಲಿ ಇಸಿಜಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಗಂಭೀರ ಹೃದಯಾಘಾತ ಸಂಭವಿಸಿ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪ್ರಭಾ ಅವರಿಗೆ ಈ ಹಿಂದೆ ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳು ಇದ್ದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಿಷ್ಟ ಸ್ವಭಾವದ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಈ ಉಪನ್ಯಾಸಕಿಯ ಅಕಾಲಿಕ ನಿಧನದಿಂದ ಕಾಲೇಜು ಹಾಗೂ ಶಿಕ್ಷಣ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ. ಸಹೋದ್ಯೋಗಿಗಳು, ಶಿಷ್ಯರು ಹಾಗೂ ಪರಿಚಿತರು ಆಘಾತಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಡಿಮೆ ವಯಸ್ಸಿನವರು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಆರೋಗ್ಯದ ಕುರಿತು ಗಂಭೀರ ಚಿಂತನೆ ಮೂಡಿಸಿದೆ. ಕಡಿಮೆ ವಯಸ್ಸಿನವರಲ್ಲೂ ಹೃದಯಾಘಾತದ ಪ್ರಮಾಣ ವೇಗವಾಗಿ ಏರಿಕೆಯಾಗಿದೆ. ವೈದ್ಯರು ಮಾನಸಿಕ ಒತ್ತಡ, ದುಡಿಮೆ ಹೊರೆ, ಅನಿಯಮಿತ ಆಹಾರ, ವ್ಯಾಯಾಮದ ಕೊರತೆ, ಜಂಕ್ ಫುಡ್ ಸೇವನೆ ಹಾಗೂ ಶಾರೀರಿಕ ಚಟುವಟಿಕೆ ಕೊರತೆಯು ಈ ಹಠಾತ್ ಸಾವಿಗೆ ಕಾರಣವಾಗುತ್ತಿವೆ ಎಂಬ ಆತಂಕ ವೈದ್ಯಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ
ಈ ಹಠಾತ್ ಸಾವಿನಿಂದ ಪುನಃ ಆರೋಗ್ಯದತ್ತ ಗಂಭೀರ ಗಮನ ಹರಿಸುವ ಅಗತ್ಯತೆ ಚರ್ಚೆಗೆ ಬಂದಿದೆ. ಪ್ರಭಾ ಅವರ ಅಗಲಿಕೆಯಿಂದ ಕುಟುಂಬ ಹಾಗೂ ಶಿಕ್ಷಣ ಸಮುದಾಯ ಆಳವಾದ ನೋವಿನಲ್ಲಿದೆ.