ಕೊಟ್ಟಿಗೆಹಾರ: 35 ವರ್ಷಗಳ ಹಿಂದೆ ಸೇವಿಸಿದ ಆಹಾರದ ಬಿಲ್ ಮೊತ್ತವನ್ನು ಪಾವತಿಸಿ ಹಳೆಯ ಸಾಲವನ್ನು ತೀರಿಸಿದ ಪ್ರಕರಣ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಪ್ರಸಿದ್ಧ “ಭಾರತ್ ಹೋಟೆಲ್’ ನಲ್ಲಿ ಮಂಗಳೂರಿನ ದೇರಳಕಟ್ಟೆಯ ಎಂ.ಎ. ಮಹಮ್ಮದ್ ಮೂರೂವರೆ ದಶಕಗಳ ಹಿಂದೆ ಕಡುಬು ಮತ್ತು ಮೀನು ಸಾರು ಸೇವಿಸಿ ಆಪತ್ತಿನ ಸಂದರ್ಭದ ಕಾರಣ ಹಣ ಪಾವತಿಸದೆ ತೆರಳಿದ್ದರು.

ಇದು ಅವರ ಮನಸ್ಸಿನಲ್ಲಿ ಉಳಿದುಕೊಂಡು, ಈ ಹಿಂದಿನ ಋಣ ತೀರಿಸುವ ಉದ್ದೇಶದಿಂದ ಶನಿವಾರ ಕೊಟ್ಟಿಗೆಹಾರಕ್ಕೆ ಆಗಮಿಸಿದ್ದರು.
ಹೋಟೆಲ್ ಮಾಲೀಕರಾದ ದಿ. ಎಂ.ಇಬ್ರಾಹಿಂ ಅವರ ಪುತ್ರ ಅಜೀಜ್ ಅವರನ್ನು ಭೇಟಿ ಮಾಡಿ, ಹಳೆಯ ಬಾಕಿಯನ್ನು ಪಾವತಿಸಿ, ತಾವು ಮಾಡಿದ್ದ ತಪ್ಪಿಗೆ ಕ್ಷಮೆಯಾಚಿಸಿದರು. ಈ ಪ್ರಾಮಾಣಿಕ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಆರ್ಥಿಕ ತೊಂದರೆ ಕಾರಣದಿಂದ ಇತರ ಉದ್ದೇಶಗಳಿಂದ ಬಿಲ್ ಪಾವತಿಸದೇ ತೆರಳಿದಂತಹ ಘಟನೆ ನಡೆದಿದೆ, ಆದರೆ ಅದನ್ನು ನೆನಪಿಟ್ಟುಕೊಂಡು 35 ವರ್ಷ ಬಳಿಕ ಪಾವತಿಸುವ ಈ ಪ್ರಾಮಾಣಿಕತೆ ಇಂದಿನ ಯುಗದಲ್ಲಿ ಅಪರೂಪ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.