ಬಾಗಲಕೋಟೆ: ಹುಚ್ಚನ ಮದುವೆಲಿ ಉಂಡೋನೆ ಜಾಣ ಅನ್ನೋ ಗಾದೆಮಾತನ್ನ ನೀವೆಲ್ಲ ಕೇಳಿದ್ದೀರಿ. ಬಹುಶಃ ಇಲ್ಲಿಯೂ ಅದೇ ನಡೆದಿದೆಯೇನೋ! ಸ್ವಲ್ಪ ಚೆಂಜ್ ಮಾಡಿ ಹೇಳೋದಾದ್ರೆ, ಈ ಮದುವೆಲಿ ಬರೀ ಊಟ ಮಾಡಿ ಹೋಗಿಲ್ಲ, ಬದಲಾಗಿ ಊಟದ ಜೊತೆಗೆ ಕಾಂಚಾಣವನ್ನೂ ಸಹ ಪಡೆದು ಹೋಗಿದ್ದಾರೆ ಎನ್ನಬಹುದು.
ಹೌದು, ಇಂಥಹದ್ದೊಂದು ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದಿದೆ. ಕನ್ನೆ ಸಿಗಲಿಲ್ಲ ಅಂತಾ ಪೇಚಾಡುತ್ತಿದ್ದ ವರನಿಗೆ ಚಳ್ಳೇ ಹಣ್ಣು ತಿನ್ನಿಸಿ, ಇಂಗು ತಿಂದ ಮಂಗನಂತೆ ಮಾಡಿ ಹೋಗಿದ್ದಾರೆ. ಮುಧೋಳದ ಸೋಮಶೇಖರ್ ಎಂಬಾತ ಬಹಳ ವರ್ಷಗಳಿಂದ ಕನ್ನೆ ಹುಡುಕುತ್ತಿದ್ದ. ಎಲ್ಲಿಯೂ ಹೆಣ್ಣು ಸಿಗದ ಹಿನ್ನೆಲೆ, ಅದ್ಹೇಗೋ ಮ್ಯಾರೇಜ್ ಬ್ರೋಕರ್ ಟೀಮ್ ನ ಪರಿಚಯವಾಗಿದೆ. ಸಿಕ್ಕಿದ್ದೇ ಚಾನ್ಸು ಅಂತಾ, ಹೆಣ್ಣಿಗಾಗಿ ಅಲೆದಾಡುತ್ತಿದ್ದ ಸೋಮಶೇಖರನನ್ನ ಟಾರ್ಗೆಟ್ ಮಾಡಿದ ಬ್ರೋಕರ್ ಟೀಮ್, ಹೆಣ್ಣು ಕೊಡಿಸ್ತೀವಿ ಅಂತ ಹೇಳಿ 4 ಲಕ್ಷ ಡಿಮ್ಯಾಂಡ್ ಮಾಡಿದೆ.
ಮೊದಲೇ ಕನ್ನೆ ಸಿಗದೇ ಕಂಗಾಲಾಗಿದ್ದ ಸೋಮಶೇಖರ್ ಕೊನೆಗೂ ಬ್ರೋಕರ್ ಟೀಮ್ ನ ಡಿಮ್ಯಾಂಡ್ ಗೆ ಒಪ್ಪಿಕೊಂಡಿದ್ದಾನೆ. ಆ ಪ್ರಕಾರ ಶಿವಮೊಗ್ಗದ ಮಂಜುಳಾ ಎಂಬಾಕೆಯನ್ನ ಬ್ರೋಕರ್ ಟೀಮ್ ವರನಿಗೆ ತೋರಿಸಿ, ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ಅದ್ಧೂರಿ ಮದುವೆ ಕೂಡ ಮಾಡಿ ಮುಗಿಸಿದ್ದಾರೆ. ಒಪ್ಪಂದದ ಪ್ರಕಾರ ಮದುವೆ ದಿನವೇ ಬ್ರೋಕರ್ ಟೀಂಗೆ 4 ಲಕ್ಷ ಹಣ ಕೊಡುವ ಮಾತಾಗಿತ್ತು. ಆ ಪ್ರಕಾರ ಬ್ರೋಕರ್ ಟೀಮ್ 4 ಲಕ್ಷ ಹಣ ಪಡೆದುಕೊಂಡೇ ಮದುವೆ ಊಟ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದಾದ ಬಳಿಕ ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಾಳೆ. ಪತ್ನಿ ಎಲ್ಲಿ ಹೋಗಿದ್ದಾಳೆ ಅಂತ ವಿಚಾರಿಸಲು ಹೋದಾಗ ಪತಿ ಸೋಮಶೇಖರ್ ಗೆ ಶಾಕಿಂಗ್ ಮಾಹಿತಿಯೊಂದು ಗೊತ್ತಾಗಿದೆ. ಅದೇನಂದ್ರೆ, ಈಗಾಗಲೇ ಪತ್ನಿಗೆ ಎರೆಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಲಪಟಾಯಿಸೋದಕ್ಕೆ ಮ್ಯಾರೇಜ್ ಬ್ರೋಕರ್ ಟೀಮ್, ಸೋಮಶೆಖರ್ ನಿಗೆ ಈಗಾಗಲೇ ಎರೆಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾನ್ನ ಮುಧೋಳಕ್ಕೆ ಕರೆತಂದು ತನಗೆ ಮದುವೆ ಮಾಡಿಸಿದ್ದಾರೆ ಎಂದು ಗೊತ್ತಾಗಿದೆ.
ವಿಧಿ ಇಲ್ಲದೇ, ಬ್ರೋಕರ್ ಟೀಮ್ ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಪತಿ ಸೋಮಶೇಖರ್ ಕೇಳಿಕೊಂಡಿದ್ದಾನೆ. ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ ಪೋಲಿಸ್ ಠಾಣೆಯಲ್ಲಿ 7 ಜನರ ವಿರುದ್ಧ ಸೋಮಶೇಖರ್ ದೂರು ದಾಖಲಿಸಿದ್ದಾನೆ. ಸದ್ಯ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅದೇನೆ ಇರಲಿ..ಯಾವುದಕ್ಕೂ ನೀವೂ ಕೂಡ ಕನ್ನೆ ಹುಡುಗ್ತಿದ್ದೀರಿ ಅಂದ್ರೆ, ಹುಷಾರಾಗಿರಿ!
ಬಾಗಲಕೋಟೆ ಎಸ್.ಪಿ. ಅಮರನಾಥ ರೆಡ್ಡಿ ಮಾಹಿತಿ.
ಮದುವೆ ಮಾಡಿಸಿ ಹಣ ಹೊಡೆಯಲು ಇದೊಂದು ದೊಡ್ಡ ಜಾಲವೇ ಇದ್ದು, ಈ ಗ್ಯಾಂಗ್ ಎಲ್ಲಿ ಕಾರ್ಯಪ್ರವೃತ್ತಿಯಾಗಿದೆ ಅಂತ ಹುಡುಕಿ ತನಿಖೆ ಮಾಡುತ್ತಿದ್ದೇವೆ.ಈ ಜಾಲದಲ್ಲಿ ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದವರಿದ್ದಾರೆ.ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಮಾಡುತ್ತೇವೆ. ಇವರಿಂದ ಈ ಹಿಂದೆಯೂ ಪ್ರಕರಣ ನಡೆದಿದ್ದು, ಎಲ್ಲವನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ತಿಳಿಸಿದ್ದಾರೆ.