ಹುಬ್ಬಳ್ಳಿ, ಜೂನ್ 2: ಇತ್ತೀಚಿನ ದಿನಗಳಲ್ಲಿ ಜನ್ಮದಿನ ಆಚರಣೆ ಎಂದರೆ ಪಾರ್ಟಿ, ಹೋಟೆಲ್ ಭೋಜನ, ಪ್ರವಾಸ, ಸಾಮಾಜಿಕ ಜಾಲತಾಣಗಳಲ್ಲಿ ಝಳಪಿಸುವ ಛಾಯಾಚಿತ್ರಗಳು — ಈ ಎಲ್ಲದರಲ್ಲಿ ಹಣದ ಉತ್ಸಾಹ ತುಂಬಿರುತ್ತದೆ. ಆದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಆಲಿಯಾ ನದಾಫ್ ಎಂಬ ಬಾಲಕಿ, ತನ್ನ ತಂದೆ ಲಾಲ್ ಸಾಬ್ ಅಪ್ಪಣ್ಣ ಅವರ ಜನ್ಮದಿನವನ್ನು ತುಂಬಾ ಭಿನ್ನ ರೀತಿಯಲ್ಲಿ ಆಚರಿಸಿ ಸಮಾಜಕ್ಕೆ ಸಕಾರಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ.
ತಂದೆ ಪ್ರತಿದಿನವೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುತ್ತಿರುವುದು ಆಲಿಯಾ ಗಮನಕ್ಕೆ ಬಂತು. ಪೋಷಕರ ಮೇಲಿನ ಪ್ರೀತಿ ಮತ್ತು ಅವರ ಸುರಕ್ಷತೆಯ ಬಗ್ಗೆ ಚಿಂತೆ ಇಟ್ಟ ಈ ಯುವತಿ, ತನ್ನ ಚಿಕ್ಕವಯಸ್ಸಿನಲ್ಲೇ ಮಾನವೀಯತೆ ಮತ್ತು ಜವಾಬ್ದಾರಿಯ ಮಾದರಿಯಾಗಿದ್ದಾಳೆ. ತನ್ನ ವಿಧ್ಯಾರ್ಥಿನಿಯಾಗಿ ಸೀಮಿತವಾಗಿದ್ದರೂ, ತಾನು ಇತ್ತೀಚೆಗಷ್ಟೇ ಕೂಡಿಟ್ಟ ಹಣವನ್ನು ಬಳಸಿಕೊಂಡು, ತಂದೆಗೆ ಜನ್ಮದಿನದ ಉಡುಗೊರೆಯಾಗಿ ನೂರಾರು ರೂಪಾಯಿ ಮೌಲ್ಯದ ಗುಣಮಟ್ಟದ ಹೆಲ್ಮೆಟ್ ಖರೀದಿಸಿದಳು.
ಜನ್ಮದಿನದ ದಿನ ಬೆಳಿಗ್ಗೆ ತಂದೆಗೆ ಹೆಲ್ಮೆಟ್ ನೀಡಿದ ಆಲಿಯಾ, ತಂದೆಯ ಮುಖದಲ್ಲಿ ಮೂಡಿದ ಆಶ್ಚರ್ಯ, ಸಂತೋಷ ಮತ್ತು ಕಣ್ಣಲ್ಲಿ ಕಾಣಿಸಿಕೊಂಡ ಕೃತಜ್ಞತೆಯ ಭಾವನೆ, ಎಲ್ಲರಿಗೂ ಪ್ರೇರಣೆಯ ಮಾತುಗಳಾಗಿವೆ. ಈ ಹೆಜ್ಜೆಯ ಮೂಲಕ ಆಲಿಯಾ, “ಪ್ರೀತಿ ಉಡುಗೊರೆಗಳಲ್ಲಿ ಮಾತ್ರವಲ್ಲ, ಜವಾಬ್ದಾರಿಯಲ್ಲೂ ವ್ಯಕ್ತವಾಗಬೇಕು” ಎಂಬ ಸಂದೇಶವನ್ನೂ ಸಾರಿದ್ದಾಳೆ.
ಸಾಮಾನ್ಯವಾಗಿ ಆಧುನಿಕ ತಲೆಮಾರಿಗೆ ಪ್ರಾಕ್ಟಿಕಲ್ ಜ್ಞಾನ, ಶಿಸ್ತು, ಹಣದ ಮೌಲ್ಯ ಇವುಗಳ ಕೊರತೆ ಎಂದು ಟೀಕೆಗಳು ಕೇಳಿಸುತ್ತಿರುವ ಸಂದರ್ಭದಲ್ಲಿ, ಆಲಿಯಾ ನದಾಫ್ ಅವರ ಈ ಕೃತ್ಯ ಯುವಜನತೆಗೆ ನಿಜವಾದ ಸಮಾಜಮುಖಿ ನಡವಳಿಕೆಯ ಪಾಠವನ್ನೇ ಕಲಿಸುತ್ತಿದೆ.
ಇಂತಹ ಘಟನೆಯು ಖಂಡಿತವಾಗಿಯೂ ವಾಹನ ಚಾಲಕರಲ್ಲಿ ಹೆಲ್ಮೆಟ್ನ ಮಹತ್ವವನ್ನು ಪುನರುಚ್ಚರಿಸುವಂತಾಗಿದೆ. ಸಾರಿಗೆ ಇಲಾಖೆಯು ಸಹ ಈ ಸುದ್ದಿಗೆ ಸ್ಪಂದಿಸಿ, ಆಲಿಯಾ ನದಾಫ್ಗೆ ಪ್ರಶಂಸಾಪೂರ್ವಕ ಪ್ರಮಾಣಪತ್ರ ನೀಡಲು ಮುಂದಾಗಬೇಕು ಎಂಬ ಜನಾಭಿಪ್ರಾಯವೂ ಕೇಳಿಬರುತ್ತಿದೆ.
ಹೆಲ್ಮೆಟ್ ಧರಿಸುವುದು ಕಾನೂನು ಬದ್ಧವಾಗಿದ್ದರೂ, ಕೆಲವೊಮ್ಮೆ ಪ್ರೀತಿಯಿಂದ ನೀಡಿದ ಉಡುಗೊರೆಯು ಅದನ್ನು ಪಾಲನೆ ಮಾಡುವ ಪ್ರೇರಣೆಯನ್ನಾಗಿ ಪರಿಣಮಿಸಬಹುದು ಎಂಬ ಉದಾಹರಣೆ ಇದು.