ಲಕ್ಷ್ಮೇಶ್ವರ : ಕಳೆದ ೧೬ ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತರ ಒಕ್ಕೂಟ ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬಹುದೊಡ್ಡ ಜಯ ದೊರೆತಂತಾಗಿದ್ದು, ಸೋಮವಾರ ಮುಂಜಾನೆಯಿಂದ ಸರಕಾರದ ವತಿಯಿಂದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಆದೇಶವನ್ನು ಜಿಲ್ಲಾಧಿಕಾರಿಗಳು ನೀಡಿದ ಹಿನ್ನಲೆಯಲ್ಲಿ ರವಿವಾರ ಹೋರಾಟಗಾರರು ಪೂರ್ವಭಾವಿ ಸಭೆ ನಡೆಸಿದರು.
ವರದಿ : ಪರಮೇಶ ಎಸ್ ಲಮಾಣಿ
ಈ ವೇಳೆ ಮಾತನಾಡಿದ ಈ ಹೋರಾಟದ ಕೇಂದ್ರಬಿಂದುವಾಗಿರುವ ಆದರಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರು ಮಾತನಾಡಿ ಕಳೆದ ೧೬ ದಿನಗಳಿಂದ ಅಹೋರಾತ್ರಿ ಧರಣಿ ಮಾಡುವ ಮೂಲಕ ರೈತರು ತಮ್ಮ ಹಕ್ಕನ್ನು ಪಡೆದುಕೊಂಡಿದ್ದಾರೆ, ಇದು ಯಾರ ವಯಕ್ತಿಯ ಜಯವಲ್ಲ ಇದು ಸಮಸ್ತ ರೈತರ ಜಯವಾಗಿದೆ, ಸರಕಾರ ಆದೇಶ ನೀಡಿ ೧೦ ದಿನಗಳಾಗಿದ್ದರೂ ಸಹ ಖರೀದಿ ಕೇಂದ್ರ ಪ್ರಾರಂಭವಾಗುವ ಯಾವುದೇ ಕ್ರಮವಾಗಿರಲಿಲ್ಲ, ಇದರಿಂದ ಸರಕಾರದ ಮತ್ತು ಜಿಲ್ಲಾಡಳಿತದ ಮೇಲೆ ರೈತರ ಸಂಪೂರ್ಣ ವಿಶ್ವಾಸ ಕುಂದಿಹೋಗಿತ್ತು, ಮುಂದೆ ಹೇಗೆ ಎನ್ನುವ ಚಿಂತನೆಯನ್ನು ಹೊಂದಿದ್ದ ರೈತರು ಹೋರಾಟ ಮುಂದುವರೆಸಿದ್ದರು.
ರೈತರು ನಮ್ಮ ಬೆಳೆಗೆ ಬೆಂಬಲ ಬೆಲೆ ಕೊಡಿ ಎಂದು ಬೇಡಿಕೊಂಡಿದ್ದರೂ ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರಲಿಲ್ಲ, ಕೊನೆಗೂ ರೈತರು ರಸ್ತೆಗಿಳಿದು ಹೋರಾಟ ಪ್ರಾರಂಭಿಸುವ ಮೂಲಕ ಅಂತಿಮ ಎಚ್ಚರಿಕೆ ನೀಡಿದಾಗ, ಜಿಲ್ಲಾಡಳಿತ ಮದ್ಯರಾತ್ರಿಯ ನಂತರ ಆದೇಶ ನೀಡುವ ನಿರ್ಧಾರ ಮಾಡಿರುವದು ಸ್ವಾಗತಾರ್ಹವಾಗಿದ್ದು, ಸೋಮವಾರ ಖರೀದಿ ಕೇಂದ್ರ ಪ್ರಾರಂಭವಾಗಲಿದ್ದು, ವೇದಿಕೆಯಲ್ಲಿ ಸಾಂಕೇತಿಕವಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ತೂಕ ಪ್ರಾರಂಬಿಸಿದಾಗಲೆ ನಮ್ಮ ಹೋರಾಟ ಕೊನೆಗೊಳ್ಳಲಿದೆ ಅಲ್ಲದೆ ಸರದಿ ಉಪವಾಸವನ್ನು ಕೈಬಿಡಲಿದ್ದೇವೆ ಎಂದು ಹೇಳಿದರು.
ಹೋರಾಟದ ರೂವಾರಿ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮಾತನಾಡಿ ರೈತರ ಹೋರಾಟಕ್ಕೆ ಸರಕಾರ ಕೊನೆಗೂ ಮಣಿದಿರುವದು ರೈತ ಶಕ್ತಿಯ ಪ್ರತಿಕವಾಗಿದೆ, ಶನಿವಾರ ರಾತ್ರಿಯವರೆಗೂ ಶಾಂತಿಯುತವಾಗಿ ನಡೆದಿದ್ದ ನಮ್ಮ ಚಳುವಳಿಯಲ್ಲಿ ಆದೇಶ ಪತ್ರ ತಂದಿರುವದಾಗಿ ಹೇಳಿದ ಅಧಿಕಾರಿಗಳು ಅದರಲ್ಲಿ ಲಕ್ಷ್ಮೇಶ್ವರ ಖರೀದಿ ಕೇಂದ್ರ ಇರದಿರುವದು ಹೆಚ್ಚು ಅಕ್ರೋಶವನ್ನು ತಂದಿತು, ತಕ್ಷಣದಲ್ಲಿಯೇ ಕೊರೆಯುವ ಚಳಿಯಲ್ಲಿ ಮಠಾಧೀಶರೊಂದಿಗೆ ರೈತರು ರಸ್ತೆಗಿಳಿದು ರಸ್ತೆ ತಡೆ ನಡೆಸಿ ಹೋರಾಟವನ್ನು ತೀವ್ರಗೊಳಿಸಲಾಗಿತ್ತು, ಅಧಿಕಾರಿಗಳು ಇದರಲ್ಲಿ ಮತ್ತೆ ತಾರತಮ್ಯ ನೀತಿ ಎಸಗಿರುವ ಸಂಶಯ ಎದ್ದು ಕಾಣುತ್ತಿತ್ತು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೋರಾಟವನ್ನು ನಿಲ್ಲಿಸಲು ಮನವಿ ಮಾಡಿದ್ದು, ಕೊನೆಗೆ ರವಿವಾರ ನಸುಕಿನ ಜಾವ ೫ ಗಂಟೆಗೆ ಅಪರ ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಡಿವೈಎಸ್‌ಪಿ ಅವರು ಆದೇಶ ಪತ್ರವನ್ನು ತಂದು ರೈತರಿಗೆ ತಲುಪಿಸಿ ಹೋರಾಟಕ್ಕೆ ಅಂತ್ಯ ಹಾಡಿದರು. ಆದರೆ ಸೋಮವಾರ ನಡೆಯುವ ಖರೀದಿ ಕೇಂದ್ರದ ಪ್ರಾರಂಬೋತ್ಸವದ ಹಿನ್ನಲೆಯಲ್ಲಿ ಮುಂಜಾನೆ ಸೋಮೇಶ್ವರ, ದೂದನಾನಾ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿ ರೈತರು ಸಂಬ್ರಮಾಚರಣೆ ಮಾಡೋಣ, ೧೬ ದಿನಗಳ ಕಾಲ ಹೋರಾಟದಲ್ಲಿ ನಮಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ತಾಲೂಕಾಡಳಿತ, ಪೋಲಿಸ್ ಇಲಾಖೆ, ಪುರಸಭೆ, ರೈತ ಸಂಘಟನೆಗಳು, ಅನೇಕ ಭಜನಾ ಸಂಘಗಳು ಹಾಗೂ ಮಾಧ್ಯಮದವರು ಸಹಕಾರವನ್ನು ಸ್ಮರಿಸುತ್ತೇವೆ, ಇದು ರೈತರ ಒಗ್ಗಟ್ಟಿನ ಹೋರಾಟಕ್ಕೆ ದೊರೆತ ಜಯವಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ಮುಂಜಾನೆ ೧೧ ಗಂಟೆಗೆ ಶಿಗ್ಲಿ ನಾಕಾ ಬಳಿ ಇರುವ ಹೋರಾಟ ವೇದಿಕೆಯಲ್ಲಿ ಸೇರಿ ವಿಜಯೋತ್ಸವವನ್ನು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ೧೫ ದಿನಗಳಿಂದ ಸರದಿ ಉಪವಾಸ ಕೈಗೊಂಡಿರುವ ಪೂರ್ಣಾಜಿ ಖರಾಟೆ, ರಾಮಣ್ಣ ಉಮ್ಮೊಜಿ, ದಾದಾಪೀರ ಮುಚ್ಚಾಲೆ, ನೀಲಪ್ಪ ಶರಸೂರಿ, ಬಸವರಾಜ ಹಿರೇಮನಿ, ಹೊನ್ನಪ್ಪ ಒಡ್ಡರ, ಮಲ್ಲೇಶಪ್ಪ ಒಡ್ಡರ, ನಾಗರಾಜ ಚಿಂಚಲಿ, ಮಹೇಶ ಹೊಗೆಸೊಪ್ಪಿನ, ಸುರೇಶ ಹಟ್ಟಿ, ಕಾಶಪ್ಪ ಮುಳಗುಂದ, ಸುಭಾನ ಹೊಂಬಳ, ಮಂಜುನಾಥ ಶರಸೂರಿ, ಜ್ಞಾನೋಬಾ ಬೋಮಲೆ, ಮಂಜುನಾಥ ಕೊಡಳ್ಳಿ, ಮಂಜುನಾಥ ಬನ್ನಿಕೊಪ್ಪ, ಮುಂತಾದವರಿದ್ದರು.
