ಗದಗ: ರಾಜ್ಯದಲ್ಲಿ ಈಗಾಗಲೇ ಮೈಕ್ರೋ ಫೈನಾನ್ಸಗಳ ಕಿರುಕುಳ ವಿಷಯವಾಗಿ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ಸರ್ಕಾರ ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದೆ. ಇದರ ನಡುವೆ ಮುದ್ರಣ ಕಾಶಿ ಗದಗನಲ್ಲಿಯೂ ಮೈಕ್ರೋ ಫೈನಾನ್ಸ್ ನ ಮೀಟರ್ ಬಡ್ಡಿ ಧಂದೆಗೆ ಇಡೀ ಕುಟುಂಬವೇ ಊರು ಬಿಟ್ಟು ಓಡಿದೆ.
ಹೌದು, ಗದಗ ನಗರದ ಎಪಿಎಂಸಿ ಆವರಣದಲ್ಲಿರೋ ಹಬೀಬ್ ಕ್ಯಾಂಟೀನ್ ಮಾಲೀಕನಾದ, ಪರಶುರಾಮ ಹಬೀಬ್ ಎಂಬ ವ್ಯಕ್ತಿ ಬಡ್ಡಿದಾರರ ಕಿರುಕುಳಕ್ಕೆ ತತ್ತರಿಸಿ, ತನ್ನ ಕುಟುಂಬದೊಂದಿಗೆ ಊರೇ ಕಾಲಿ ಮಾಡಿದ್ದಾನೆ. 50 ಸಾವಿರ ರೂಪಾಯಿ ಸಾಲಕ್ಕೆ ಬಡ್ಡಿ ದಂಧೆಕೋರರು 1 ಲಕ್ಷ 50 ಸಾವಿರ ರೂಪಾಯಿ ಬಾಂಡ್ ಮಾಡಿಸಿಕೊಂಡಿದ್ದರಂತೆ. ಇದರಿಂದ ಒಂದು ಸಾಲ ತೀರಿಸೋಕೆ ಮತ್ತೊಂದು ಕಡೆ ಚಕ್ರ ಬಡ್ಡಿಗೆ ಪರಶುರಾಮ ಸಾಲ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಾಲಗಾರರು ನನಗೆ ಕಿರುಕುಳ ನೀಡಿದ್ದು, ನನ್ನ ಕಿಡ್ನಿ ಮಾರಿಯಾದರೂ ನನ್ನ ಸಾಲ ತೀರಿಸಿಬೇಕೆಂದುಕೊಂಡೆ. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ನನ್ನ ಕುಟುಂಬಕ್ಕೆ ತೊಂದರೆಯಾಗಬಾರದು ಅನ್ನುವ ದೃಷ್ಟಿಯಿಂದ, ನಾನು ಊರು ಬಿಟ್ಟು ಬಿಟ್ಟಿದ್ದೇನೆ. ಮೇಲಾಗಿ ನನ್ನ ಕುಟುಂಬ ಹಾಗೂ ಮಕ್ಕಳ ಮುಖ ನೋಡಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದು ಜೀವಂತವಾಗಿದ್ದೇನೆ ಎಂದು ಹಬೀಬ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗದಗನ ಎಪಿಎಂಸಿಯಲ್ಲಿ ಹೋಟೆಲ್ ಉದ್ಯೋಗ ನಡೆಸುತ್ತಿರೋ ಹಬೀಬ, ಹಲವರ ಕಡೆ, ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರಂತೆ. ಇದರಿಂದ ಸಾಲಗಾರರ ಕಿರಕುಳಕ್ಕೆ ಬೇಸತ್ತು, ಕ್ಯಾಂಟೀನ್ ಗೆ ಬೀಗ ಹಾಕಿ ಕುಟುಂಬ ಸಮೇತ ಹಬೀಬ ಊರು ಬಿಟ್ಟಿದ್ದು, ಸದ್ಯ ನಿಗೂಢ ಸ್ಥಳದಿಂದ ವಿಡಿಯೋ ಮೂಲಕ ತಮ್ಮ ಕಷ್ಟ ಹೇಳಿಕೊಂಡಿರೋ ಪರಶುರಾಮ, ಕೊಟ್ಟಿರುವ ಕಾಸಿಗೆ ಲಕ್ಷ ಲಕ್ಷ ಬಡ್ಡಿ ಹಾಕಿ ಕಿರುಕುಳ ನೀಡಿದ್ದಾರೆ ಅಂತ ಕಣ್ಣೀರು ಹಾಕಿದ್ದಾರೆ.
ಇನ್ನು ಜೀವ ಭಯದಿಂದ ಪರಶುರಾಮ ಹಬೀಬ ಕುಟುಂಬವೇನೋ ಊರು ತೊರೆದಿದೆ. ಆದರೆ ಮೀಟರ್ ಬಡ್ಡಿ ದಂಧೆಯ ಬಿಸಿ ಹಬೀಬ ಕುಟುಂಬ ಸಾಕಿ ಸಲುಹಿದ ಮೂಕ ಶ್ವಾನಕ್ಕೂ ತಟ್ಟಿದೆ. ಸಾಲಪಡೆದ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಶ್ವಾನದ ಮಾಲೀಕ ನಾಪತ್ತೆಯಾಗಿದ್ದು, ಅವರ ಸಾಕು ನಾಯಿ ಅನಾಥವಾಗಿದೆ. ತನ್ನ ಮಾಲೀಕನಿಗಾಗಿ ಕ್ಯಾಂಟಿನ್ ಬಳಿಯೇ ಸಾಕು ನಾಯಿ ಕಾಯುತ್ತಾ ಕುಳಿತಿದೆ.
ಈಗಾಗಲೇ ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಮಿತಿಮೀರಿದೆ. ಸಾಲಗಾರರ ಕಿರುಕುಳಕ್ಕೆ ಅದೆಷ್ಟೋ ಕುಟುಂಬಗಳು ಬೇಸತ್ತು ಯಾರಿಗೂ ಹೇಳದೇ ಕೇಳದೇ ಊರು ಬಿಟ್ಟಿವೆ. ಇನ್ನಾದರೂ ಈ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬೀಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.