ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮೂಡಾ ಹಗರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಕುಮಾರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು (ಜನೆವರಿ 30) ರಂದು ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಆರೋಪ ಸಾಬೀತಾಗಿದ್ದರಿಂದ ಕೋರ್ಟ್ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆಯ ಪ್ರಮಾಣ ಮಾತ್ರ ಪ್ರಕಟಿಸಿಲ್ಲ.
ಪತ್ರಿಕೆ ನಡೆಸಲು ಹಾಗೂ ಗೃಹೋಪಯೋಗಕ್ಕಾಗಿ ಕುಮಾರ್ ಎಂಬುವವರಿಂದ ಕೃಷ್ಣ ಅವರು 2015ರಲ್ಲಿ 1.75 ಲಕ್ಷ ರೂ ಸಾಲ ಪಡೆದಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಕೋಅಪರೇಟಿವ್ ಬ್ಯಾಂಕ್ ಚೆಕ್ ನೀಡಿದ್ದರು. ಈ ಚೆಕ್ಅನ್ನು ಕುಮಾರ್ ಅವರು ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರ್ ಅವರು ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು, ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆ ಪ್ರಮಾಣ ಎಷ್ಟು? ಏನು ಎನ್ನುವುದು ಮಾತ್ರ ಪ್ರಕಟಿಸಿಲ್ಲ.

ಇನ್ನು ಕೋರ್ಟ್ ಶಿಕ್ಷೆ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ ಕುಮಾರ್ ಸಾಲವನ್ನೇ ನೀಡಿರಲಿಲ್ಲ. ನನಗೆ ಸಮಸ್ಯೆ ಇದ್ದ ಕಾರಣ ಸಾಲ ಕೇಳಿದ್ದೆ. ಸಾಲ ಕೊಡುವುದಾಗಿ ಹೇಳಿ ದಿನಾಂಕ ನಮೂದಿಸದ ಚೆಕ್ ಪಡೆದಿದ್ದ. ನಂತರ ಸಾಲವನ್ನು ಕೊಡದೆ ಚೆಕ್‌ನ್ನು ಬ್ಯಾಂಕ್‌ಗೆ ಪ್ರೆಸೆಂಟ್ ಮಾಡಿದ್ದ. ನಂತರ ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಈ ಸಂಬಂಧ ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದೇ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ಮೂರನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಕ್ಟೋಬರ್ 1ರಂದು ಮಂಗಳವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು. ಎನ್.ಕುಮಾರ್ ಎಂಬುವವರು 2015ರಲ್ಲಿ ರಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು ಅದು ಎವಿಡೆನ್ಸ್ ಹಂತದಲ್ಲಿದ್ದು,ಅಕ್ಟೋಬರ್ 1ರಂದು ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರು ಹಾಜರಾದ ಕಾರಣ ನ್ಯಾಯಾಲಯವು ಜಾಮೀನು ರಹಿತ ಬಂಧನ ಆದೇಶ ಹೊರಡಿಸಿತ್ತು. ಇದೀಗ ಆರೋಪ ಸಾಬೀತಾಗಿದ್ದರಿಂದ ಕೋರ್ಟ್ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.