ಚಂಡೀಗಢದಲ್ಲಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ್ ಎಂಬ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ. ಇದರೊಂದಿಗೆ ನಗರವು ಮೂರು ಕಾನೂನುಗಳ 100% ಅನುಷ್ಠಾನವನ್ನು ಮಾಡಿದ ದೇಶದ ಮೊದಲ ಆಡಳಿತ ಘಟಕವಾಯಿತು.
ಈ ಕಾನೂನುಗಳು ಕ್ರಮವಾಗಿ ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸಿ ಜುಲೈ 1 ರಿಂದ ಜಾರಿಗೆ ಬಂದಿವೆ.
ಭಯೋತ್ಪಾದಕರು ಇನ್ನು ಮುಂದೆ ಕಾನೂನುಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ: ಪ್ರಧಾನಿ ಮೋದಿ
ಹೊಸ ಕ್ರಿಮಿನಲ್ ಕಾನೂನುಗಳು ಎಲ್ಲಾ ನಾಗರಿಕರ ಅನುಕೂಲಕ್ಕಾಗಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಸಂವಿಧಾನದಲ್ಲಿ ನಮೂದಿಸಿದ ಅಂಶಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದು ಪಿಎಂ ಮೋದಿ ವಿವರಿಸಿದರು.
ಹೊಸ ಕಾನೂನುಗಳ ಅಡಿಯಲ್ಲಿ, ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳು ಕಾನೂನು ಚೌಕಟ್ಟಿನಲ್ಲಿ ಯಾವುದೇ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಈ ಕಾನೂನುಗಳು ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯವನ್ನು ಸೂಚಿಸುತ್ತವೆ ಎಂದು ತಿಳಿಸಿದ ಮೋದಿ, ಈ ಕಾನೂನುಗಳು ಬ್ರಿಟಿಷರು ಭಾರತವನ್ನು ಆಳಿದಾಗ ನಡೆಸಿದ ದೌರ್ಜನ್ಯ ಮತ್ತು ಶೋಷಣೆಯ ಭಾಗವಾಗಿದೆ ಎಂದು ಹೇಳಿದರು
“1857 ರ ಕ್ರಾಂತಿಯು ಬ್ರಿಟಿಷ್ ಆಳ್ವಿಕೆಯ ಬೇರುಗಳನ್ನು ಅಲುಗಾಡಿಸಿತು ಮತ್ತು 1860 ರಲ್ಲಿ ಅವರು ಐಪಿಸಿಯನ್ನು ತಂದರು ಮತ್ತು ನಂತರ, ಭಾರತೀಯ ಸಾಕ್ಷ್ಯ ಕಾಯ್ದೆ ಮತ್ತು ಸಿಆರ್ಪಿಸಿ ಚೌಕಟ್ಟು ಅಸ್ತಿತ್ವಕ್ಕೆ ಬಂದವು. ಆ ಕಾನೂನುಗಳ ಉದ್ದೇಶ ಭಾರತೀಯರನ್ನು ಶಿಕ್ಷಿಸುವುದು ಮತ್ತು ಅವರನ್ನು ಗುಲಾಮರನ್ನಾಗಿ ಮಾಡುವುದು” ಎಂದು ಪ್ರಧಾನಿ ಹೇಳಿದರು.
ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಂಡೀಗಢ ಪೊಲೀಸರು ನಡೆಸಿದ ಲೈವ್ ಕ್ರೈಮ್ ಸೀನ್ ತನಿಖಾ ಡೆಮೊವನ್ನು ಮೋದಿ ವೀಕ್ಷಿಸಿದರು, ಇದು ಹೊಸ ಕಾನೂನುಗಳ ಅಡಿಯಲ್ಲಿ ಸಾಕ್ಷ್ಯ ಸಂಗ್ರಹವನ್ನು ಪ್ರದರ್ಶಿಸಿತು. ಎಸ್ಎಸ್ಪಿ ಕನ್ವರ್ದೀಪ್ ಕೌರ್ ಅವರಿಗೆ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಹೊಸ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ಚಂಡೀಗಢ ಆಡಳಿತವನ್ನು ಶ್ಲಾಘಿಸಿದರು.
ಪ್ರಧಾನಿ ಮತ್ತು ಗೃಹ ಸಚಿವರೊಂದಿಗೆ ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸಲಹೆಗಾರ ರಾಜೀವ್ ವರ್ಮಾ ಮತ್ತು ಚಂಡೀಗಢ ಪೊಲೀಸ್ ಮಹಾನಿರ್ದೇಶಕ ಸುರೇಂದ್ರ ಸಿಂಗ್ ಯಾದವ್ ಇದ್ದರು.