ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ.
ಹೈದ್ರಾಬಾದ್ ಮೂಲದ ಅನನ್ಯ ಮೋಹನ್ ರಾವ್ (26) ನೀರು ಪಾಲಾದ ವೈದ್ಯೆ ಎಂದು ತಿಳಿದು ಬಂದಿದೆ. ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಅನನ್ಯರಾವ್ (ಫೆಬ್ರುವರಿ 18) ರಂದು ಮೂವರು ಸ್ನೇಹಿತರ ಜೊತೆಗೆ ಹಂಪಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಅಲ್ಲದೇ ಕೊಪ್ಪಳದ ಗಂಗಾವತಿ ಬಳಿಯ ಸಾಣಾಪುರ ಬಳಿ ತುಂಗಭದ್ರಾ ನದಿಗೂ ಭೇಟಿ ನೀಡಿದ್ದರು.
ನಿನ್ನೆ (ಫೆ.19) ಮುಂಜಾನೆ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.ಹಲವು ಬಾರಿ ಯೋಚನೆ ಮಾಡಿ 20 ಅಡಿ ಎತ್ತರದಿಂದ ನದಿಗೆ ಧುಮುಕಿದ್ದ ಅನನ್ಯ ಈಜಿ ಮೇಲೆ ಬರಲಾಗದೇ ಒದ್ದಾಡುತ್ತಾ ನೀರಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ನಿರಂತರ ಶೋಧನಾ ಕಾರ್ಯಾಚರಣೆಯಿಂದ ಕೊನೆಗೂ ಅನನ್ಯ ಮೃತದೇಹ ಪತ್ತೆಯಾಗಿದೆ.

ಹೈದ್ರಾಬಾದ್ ಮೂಲದವರಾಗಿರೋ ಡಾ. ಅನನ್ಯ ರಾವ್ ಮೈನಮಪಲ್ಲಿ,ನದಿಯಲ್ಲಿ ಕೊಚ್ಚಿ ಹೋಗಿದ್ದ ಕಾರಣ, ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ದಳ, ತೆಪ್ಪ ಹಾಕುವ ಯುವಕರು ಮೃತದೇಹದ ಹುಡಕಾಟದಲ್ಲಿದ್ದರು.
ಆದರೆ ಮೃತದೇಹ ಸಿಗದ ಹಿನ್ನೆಲೆ ಜಿಂದಾಲ್ ಕಾರ್ಖಾನೆಯ ಎಸ್ ಡಿ ಆರ್ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಮುಳುಗು ತಜ್ಞರಿಂದ ನೀರಿನಲ್ಲಿ ಹುಡುಕಾಟ ನಡೆಸಲಾಗಿತ್ತು. ಸದ್ಯ ಮೃತದೇಹ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ವೈದ್ಯೆ ಅನನ್ಯರಾವ್ ಸಾವಿಗೂ ಮುನ್ನ 20 ಅಡಿ ಎತ್ತರದಿಂದ ನದಿಗೆ ಧುಮುಕುವ ಕೊನೆ ಕ್ಷಣದ ದೃಶ್ಯ ಅವರ ಸ್ನೆಹಿತರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.