ಮುಂಡರಗಿ: ಕ್ರೀಡೆಯಿಂದ ಆರೋಗ್ಯ ಸಂಪತ್ತು ಹಾಗೂ ಮಾನಸಿಕ ಸಂಪತ್ತು ಹೆಚ್ಚುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಜಿಲ್ಲಾ ಪಂಚಾಯತ್ ಗದಗ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ, 2025-26ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವು ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು, “ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅವಶ್ಯಕ. ಕ್ರೀಡೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸರ್ಕಾರಿ ಪಿಯು ಕಾಲೇಜು ಅಧ್ಯಕ್ಷರಾದ ಚಂದ್ರು ಲಮಾಣಿ ಅವರು, “ಕ್ರೀಡಾ ಸ್ಪೂರ್ತಿಯಿಂದ ವಿದ್ಯಾರ್ಥಿಗಳು ಆಟವಾಡಬೇಕು. ನಿರ್ಣಾಯಕರು ನೀಡುವ ತೀರ್ಮಾನಕ್ಕೆ ಕ್ರೀಡಾಪಟುಗಳು ತಲೆಬಾಗಬೇಕು. ಕಳೆದ ವರ್ಷ ಜಾಲವಾಡಗಿ ವಿದ್ಯಾರ್ಥಿನಿಯರು ಜಮ್ಮು-ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮುಂಡರಗಿಯ ಘನತೆಯನ್ನು ಹೆಚ್ಚಿಸಿದ್ದಾರೆ. ಈ ಬಾರಿ ಕೂಡ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗರಾಜ್ ಹುಬ್ಬಳ್ಳಿ, ಮುಖಂಡರಾದ ಆನಂದಗೌಡ ಪಾಟೀಲ್, ಕುಮಾರಸ್ವಾಮಿ ಹಿರೇಮಠ, ಮಹೇಶ್ ನಾಗರಹಳ್ಳಿ, ದೇವಪ್ಪ ಇಟಗಿ, ಮಂಜುನಾಥ್ ಮುಧೋಳ್, ಬಸವರಾಜ ಬಿಳಿಮಗ್ಗದ, ಪವಿತ್ರ ಕಲ್ಕುಟಗಾರ್, ಕೊಟ್ರೇಶಪ್ಪ ಅಂಗಡಿ, ಮೈಲಾರಪ್ಪ ಕಲಿಕೇರಿ, ಬಸವರಾಜ್ ಚಿಗಣ್ಣವರ್ ಹಾಗೂ ಅನೇಕ ಗಣ್ಯರು ಹಾಜರಿದ್ದರು.