Headlines

ಶ್ರದ್ಧಾ, ಸೇವೆ, ಸಂಸ್ಕೃತಿಯ ಸಂಕೇತ: ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮೋತ್ಸವ

ಹೊನ್ನಾವರ: ಹಸಿದವರಿಗೆ ಅನ್ನ, ವಿದ್ಯ ಇಲ್ಲದವರಿಗೆ ವಿದ್ಯೆ, ನೊಂದವರಿಗೆ, ನಿರಾಶ್ರೀತರಿಗೆ, ಬೇಡಿ ಬಂದವರಿಗೆ ಕರುಣಿಸಲು ಪ್ರಾಣ ದೇವರಿರುವುದರಿಂದಲೇ ಹೆಸರಿಗೆ ತಕ್ಕಂತೆ ಈ ಕ್ಷೇತ್ರ ಬಂಗಾರಮಕ್ಕಿಯಾಗಿದೆ ಎಂದು ಬೆಂಗಳೂರಿನ ಪೂಜ್ಯ ಯೋಗೀಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಹೊನ್ನಾವರ ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಗೇರಸೊಪ್ಪದ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಹಾಗೂ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಇಲ್ಲಿ ಪ್ರಾಣ ದೇವರೇ ಇದ್ದಾರೆ. ಜೊತೆಗೆ ಮಾರುತಿ ಗುರೂಜಿ ಅವರು ಕೂಡ ಪ್ರಾಣೇಶ್ವರ, ಪ್ರಾಣದೇವರೇ ಆಗಿದ್ದಾರೆ. ಅವರಲ್ಲಿ ಸಾಮಾಜಿಕ ಕಾಳಜಿ, ಬದ್ಧತೆ, ಸೇವಾ ಗುಣ ಮಾದರಿಯಾಗಿದೆ.ನಮಗೆ ಮರಣ ಭಯವಿಲ್ಲ, ಹೊಗಳಿಕೆ, ತೆಗಳಿಕೆ ಬೇಕಿಲ್ಲ. ಮಾರುತಿ ಗುರುಗಳ ಬಗೆಗೆ ನಾನು ಈ ಮಾತನ್ನು ಮುಖಃಸ್ತುತಿ ಮಾಡುತ್ತಿಲ್ಲ. ಮನಸಾರೆ ಹೇಳುತ್ತಿರುವುದು ಎಂದು ಹೇಳಿದರು.

ಇಂದು ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯ ಸ್ವಲ್ಪವಾದರೂ ಉಳಿದಿರಲು ರಮಣ ಮಹರ್ಷಿಗಳು, ರಾಮಕೃಷ್ಣ, ವಿವೇಕಾನಂದರಂತವರ ತ್ಯಾಗದ ಫಲವಾಗಿದೆ‌. ಇಂದು ಮನುಷ್ಯನ ಜಡತ್ವ ತೆಗೆದು ಜ್ಞಾನ ಯೋಗದೆಡೆಗೆ ಸಾಗಬೇಕು. ಆದರೆ ಭಾರತೀಯ ಸನಾತನ ಸಂಸ್ಕೃತಿಗೆ ಇಂದು ಮಹತ್ವವೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ನಿಮ್ಮನ್ನು ನೀವು ಮೊದಲು ಪೂಜಿಸಿಕೊಳ್ಳುವ ಗುಣ ಹೊಂದಬೇಕು. ಮಕ್ಕಳ ಮನೋವಿಕಾಸಕ್ಕೆ ಇಂತಹ ಧಾರ್ಮಿಕ ಸಂಸ್ಥೆಗಳು ಬೇಕು. ನೀವು ನಿಮ್ಮನ್ನು ಪ್ರೀತಿಸಿ, ಪೂಜಿಸಿ, ಗೌರವಿಸಿ, ಮಾನಸಿಕ ಶುಚಿ ಮಾಡಿ, ಮಹಾ ಪುರುಷರ ಸೇವೆಯಲ್ಲಿ ತೊಡಗಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯವಾಗುತ್ತದೆ ಎಂದರು.

ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಬಂಗಾರನಕ್ಕಿ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿ ಆಶೀರ್ವಚನ ನೀಡಿ, ಈ ದಿನ ಕ್ಷೇತ್ರಕ್ಕೆ ಅವಿಸ್ಮರಣೀಯ ದಿನ, ಕಲ್ಲಿನಲ್ಲಿ ದೇವತ್ವದ ಭಾವನೆ ಶಿಲ್ಪಿ ಮಾತ್ರ ನೋಡಲು ಸಾಧ್ಯ. ಶಿಲ್ಪ ಅಭಿವ್ಯಕ್ತ ಮಾಡಿದ ಶಿಲೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾಪನೆಗೊಳ್ಳುವುದೇ ದೈವೇಚ್ಛೆ. ಅಂತ ಸುದೀನ ಕಣ್ತುಂಬಿಕೊಂಡ ನಾವೆಲ್ಲ ಭಾಗ್ಯಶಾಲಿಗಳು. ನೂರಾರು ವರ್ಷ ಜಲಾಧಿವಾಸದಲ್ಲಿದ್ದ ದೇವರ ವಿಗ್ರಹ ಈ ಕ್ಷೇತ್ರಕ್ಕೆ ಬಂದ ನಂತರವೇ ಈ ಕ್ಷೇತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ‌‌ ಇಂದು ಕಲಾಸಂಕೋಚ ಮಾಡಿರುವ ಆ ವಿಗ್ರಹಕ್ಕೆ ಪುನಃ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಸಂತಸದ ಸಂಗತಿಯಾಗಿದೆ. ಕ್ಷೇತ್ರದ ಹಾಗೂ ಭಕ್ತರ ಪಾಲಿಗೆ ಇಂದು ಪುಣ್ಯದ ದಿನ ಎಂದರು.

ಸಂಸ್ಕಾರ ಇಲ್ಲದಿದ್ದರೆ ಸಮಾಜ ದಾರಿ ತಪ್ಪುತ್ತದೆ. ನಮ್ಮ ಆಚಾರ, ವಿಚಾರಗಳ ಬಗ್ಗೆ ಕನಿಷ್ಟ ಕಲ್ಪನೆ ನಮ್ಮಲ್ಲಿರಬೇಕು.ಮೊದಲು ನಮ್ಮನ್ನು ನಾವಾಗಿಯೇ ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳೋಣ. ನಾವು ಪರಿವರ್ತನೆಗೊಂಡರೆ ನಮ್ಮ ಮಕ್ಕಳು‌ ಪರಿವರ್ತನೆಯಾಗುತ್ತಾರೆ. ಸಮಾಜ ಸುಸಂಸ್ಕೃತವಾಗುತ್ತದೆ‌.ನಿಮ್ಮನ್ನ ನೀವು ಪರಿವರ್ತನೆ ಮಾಡಿಕೊಂಡಾಗ ಸಮಾಜದ ಏಳಿಗೆ ಜೊತೆಗೆ ಉದ್ಧಾರವಾಗಲು ಸಾಧ್ಯ ಎಂದರು.

ಗೋವಾ ಮಾಜಿ ಸಚಿವ ದಯಾನಂದ ಮಾಂಜ್ರೇಕರ್ ಮಾತನಾಡಿ
ಬಹಳ ಕಡಿಮೆ ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಕ್ಷೇತ್ರದ ಮೂಲಕ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ಆಂಜನೇಯ ದೇವರ ದರ್ಶನ ಪಡೆಯುವುದೇ ಒಂದು ಸೌಭಾಗ್ಯವಾಗಿದೆ. ಶ್ರೀ ಕ್ಷೇತ್ರದ ಮೂಲಕ ಕೇವಲ ಧಾರ್ಮಿಕ ಕಾರ್ಯ ಅಷ್ಟೆ ಅಲ್ಲದೇ ಸೇವಾ ಕಾರ್ಯದ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾನು ತೊಡಗಿಸಿಕೊಂಡಿದೆ. ಸರ್ಕಾರದ ಯಾವುದೇ ಅನುದಾನ ಪಡೆಯದೇ ಒಂದು ಉತ್ತಮ ಶೈಕ್ಷಣಿಕ ಸಂಸ್ಥೆ ಕಟ್ಟಿರುವುದು ಸ್ವಾಗತಾರ್ಹ. ಇಂತಹ ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಸಂಸ್ಥೆಗಳಿಗೆ ಸರ್ಕಾರ ಪ್ರೋತ್ಸಾಹಿಸಬೇಕು ಎಂದರು.

ಈ ವೇಳೆ ಮಾಜಿ ಸಚಿವ ಎಸ್.ಶಿವಣ್ಣ,
ಡಿ.ಆರ್. ಶಿವಪ್ರಕಾಶ, ಉದ್ಯಮಿ ಜೆ.ಪಿ. ಶಿವಣ್ಣ, ಸಾಹಿತಿ ಮಾಸ್ಕೀರಿ ಎಂ.ಕೆ. ನಾಯಕ, ಉದ್ಯಮಿ ಹರಿಕೃಷ್ಣ ಭಟ್ ವೇದಿಕೆ ಮೇಲಿದ್ದರು.

ಶಂಖನಾದ ಮೊಳಗಿಸುವ ಮೂಲಕ ಧರ್ಮಸಭೆಗೆ ಕು. ಭರತ್ ಚಾಲನೆ ನೀಡಿದರು. ಕು. ಹರಿಪ್ರೀತ ಪ್ರಾರ್ಥನೆ ಹೇಳಿದರು. ಸುಭ್ರಾಯ್ ಭಟ್, ಹರ್ಷಾ ಭಟ್ ವೇದಘೋಷ ಪಠಿಸಿದರು.ಉತ್ಸವ ಸಮಿತಿ ಕಾರ್ಯದರ್ಶಿ ಅಜಿತ್, ಸ್ವಾಗತಿಸಿದರು. ಮಂಜುನಾಥಗೌಡ ವಂದಿಸಿದರು.

Leave a Reply

Your email address will not be published. Required fields are marked *