ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ 2019 ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಶಿಸಿದ್ದು, ನಟ ಕಿಚ್ಚ ಸುದೀಪ್ ಹಾಗೂ ನಟಿ ಅನುಪಮಾಗೌಡ, ನಿರ್ದೇಶಕ ಪಿ ಶೇಷಾದ್ರಿ ಸೇರಿದಂತೆ ಚಿತ್ರರಂಗದ ಹಲವರು ಪ್ರಶಸ್ತಿಗೆ ಭಾಜರಾಗಿದ್ದಾರೆ.
ಏಳು ವರ್ಷಗಳ ಬಳಿಕ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಮರುಚಾಲನೆ ದೊರೆತಿದೆ. 25 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಸುದೀಪ್ ಅವರಿಗೆ ‘ಪೈಲ್ವಾನ್’ ಚಿತ್ರಕ್ಕಾಗಿ ಅತ್ಯುತ್ತಮ ನಟ, ಅನುಪಮಾ ಗೌಡ ಅವರಿಗೆ ‘ತ್ರಯಂಬಕಂ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಪಿ.ಶೇಷಾದ್ರಿ ನಿರ್ದೇಶನದ ‘ಮೋಹನ ದಾಸ’ ಮೊದಲನೆ ಅತ್ಯುತ್ತಮ ಚಿತ್ರವಾಗಿ, ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್‌ಟೇಲ್’, ‘ಅರ್ಥ್ಯಂ’ ಚಿತ್ರಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಗಳಾಗಿ ಹೊರಹೊಮ್ಮಿವೆ. ‘ಕನ್ನೇರಿ’ ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರವಾದರೆ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ vs ಇಂಗ್ಲೆಂಡ್’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿದೆ.
ಜಯಂತ್ ಕಾಯ್ಕಿಣಿ ‘ಅತ್ಯುತ್ತಮ ಕಥೆ’, ಬರಗೂರು ರಾಮಚಂದ್ರಪ್ಪ ‘ಅತ್ಯುತ್ತಮ ಸಂಭಾಷಣೆ’, ವಿ.ಹರಿಕೃಷ್ಣ ‘ಅತ್ಯುತ್ತಮ ಸಂಗೀತ’, ಜಿ.ಎಸ್.ಭಾಸ್ಕರ್ ‘ಅತ್ಯುತ್ತಮ ಛಾಯಾಗ್ರಹಣ’ಕ್ಕಾಗಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಅತ್ಯುತ್ತಮ ಚಿತ್ರ ಮತ್ತು ನಿರ್ದೇಶನ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಅತ್ಯುತ್ತಮ ಎರಡನೇ ಚಿತ್ರ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ, ಅತ್ಯುತ್ತಮ ಮೂರನೇ ಚಿತ್ರ ₹50,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿದೆ. ಅತ್ಯುತ್ತಮ ಸಾಮಾಜಿಕ ಕಾಳಜಿ ಪ್ರಶಸ್ತಿ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿವೆ.
ನಿರ್ದೇಶಕ, ನಿರ್ಮಾಪಕ ನಂಜುಂಡೇಗೌಡ ಅವರ ಅಧ್ಯಕ್ಷತೆಯಲ್ಲಿನ ಅಯ್ಕೆ ಸಲಹಾ ಸಮಿತಿ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, 172 ಚಿತ್ರಗಳನ್ನು ಅಯ್ಕೆ ಸುತ್ತಿಗೆ ಪರಿಗಣಿಸಲಾಗಿತ್ತು.