ಗದಗ.(ಮುಂಡರಗಿ) ಆ. 23: ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಶುರುವಾಗಿದ್ದು, ಬಿಜೆಪಿ ಪಕ್ಷದ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಹಾವಿನಾಳ ಅವರ ರಾಜೀನಾಮೆ ಪತ್ರ ಈಗಾಗಲೇ ಪಕ್ಷದ ವಾಟ್ಸಪ್ ಗ್ರುಪ್ ಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಅವರಿಗೂ ತಲುಪಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಜಿಲ್ಲಾದ್ಯಕ್ಷ ರಾಜು ಕುರಡಗಿ, ಹೇಮಗಿರೀಶ ಹಾವಿನಾಳ ಅವರು ಪಕ್ಷದ ಆಂತರಿಕ ವಿಷಯಗಳ ಹಿನ್ನೆಲೆಯಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ನಾನು ಪಕ್ಷದ ಹಿರಿಯ ನಾಯಕರ ಈ ವಿಚಾರ ಗಮನಕ್ಕೆ ತರುವ ಮೂಲಕ, ರಾಜೀನಾಮೆ ಅಂಗೀಕಾರ ಮಾಡಬೇಕೋ ಬೇಡವೋ ಅನ್ನುವದನ್ನ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸದ್ಯ ಈ ಬೆಳವಣಿಗೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹಾವಿನಾಳ ರಾಜೀನಾಮೆ ನೀಡಿದ್ದರೂ, ಇದರ ಹಿನ್ನಲೆಯಲ್ಲಿ ಆಂತರಿಕ ಅಸಮಾಧಾನವೇ ಕಾರಣ ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ.
ಶಿರಹಟ್ಟಿಯ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಹಾವಿನಾಳ ಅವರ ನಡುವೆ ಇತ್ತೀಚೆಗೆ ಉಂಟಾದ ವೈಮನಸ್ಸು, ಜೊತೆಗೆ ಧರ್ಮಸ್ಥಳ ಪ್ರಕರಣದ ಕುರಿತು ಪಕ್ಷದಿಂದ ಪ್ರತಿಭಟನೆ ನಡೆಸುವ ವಿಷಯದಲ್ಲೂ ಭಿನ್ನಾಭಿಪ್ರಾಯ ತಲೆದೋರಿದ್ದುದಾಗಿ ಮೂಲಗಳು ತಿಳಿಸಿವೆ. ಶಾಸಕರ ಆಪ್ತ ಕಾರ್ಯದರ್ಶಿಯ ವರ್ತನೆಗೂ ಹಾವಿನಾಳ ಅಸಮಾಧಾನಗೊಂಡಿದ್ದಾರೆಯೇ ಎಂಬುದೂ ಪಕ್ಷದೊಳಗೆ ಪಿಸುಪಿಸು ಮಾತಾಗುತ್ತಿದೆ.
ಸದ್ಯ ಪಕ್ಷದಲ್ಲಿನ ಓರ್ವ ಮುಖಂಡನ resignation ಕ್ಷೇತ್ರದಲ್ಲಿನ ಪಕ್ಷದ ಮೇಲೆ ಹಾಗೂ ಕಾರ್ಯಕರ್ಯರ ನಡುವೆ ಯಾವ ರೀತಿ ಪರಿಣಾಮ ಬೀರುತ್ತದೆ, ಮುಂಬರುವ ದಿನಗಳಲ್ಲಿ ಈ ಬೆಳವಣಿಗೆ ಶಿರಹಟ್ಟಿ ರಾಜಕೀಯ ಸಮೀಕರಣವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.ಇನ್ನು ಹೇಮಗಿರೀಶ ಹಾವಿನಾಳ ಅವರ ರಾಜೀನಾಮೆ ವಿಚಾರಕ್ಕೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಏನು ಹೇಳಿದ್ದಾರೆ ಇಲ್ಲಿದೆ ನೋಡಿ…
” ನನಗೆ ಯಾರೂ ಪಿಎ ಇಲ್ಲ..ಎಲ್ಲರೂ ನನ್ನ ಆಪ್ತರು.ಹೇಮಗಿರೀಶ ಅವರ ರಾಜೀನಾಮೆ ನನ್ನ ಗಮನಕ್ಕೆ ಬಂದಿದೆ. ಅವರ ರಾಜಿನಾಮೆ ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ ಪಕ್ಷ ಸಮುದ್ರ ಇದ್ದ ಹಾಗೆ. ಇಲ್ಲಿ ಎಲ್ಲವನ್ನೂ, ಎಲ್ಲ ಅಡೆ ತಡೆಗಳನ್ನೂ ನಿವಾರಿಸಿ, ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಅಲ್ಲದೇ ನಾನಾಗಲಿ, ನನ್ನ ಕಾರ್ಯಕರ್ತರಾಗಲಿ ಅಥವಾ ಪಕ್ಷದ ಮುಖಂಡರು ಅಂತ ಗುರುತಿಸಿಕೊಳ್ಳಬೇಕಾದರೆ ಪಕ್ಷ ಮೊದಲು.ಈ ಪಕ್ಷದಲ್ಲಿ ನಾವು ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನ ಬದಿಗಿಟ್ಟು ಪಕ್ಷದ ಬಲವರ್ಧನೆಗೆ ನಿಲ್ಲಬೇಕು. ನಾನು ಸಹ ಕಳೆದ ಎರೆಡೂವರೆ ವರ್ಷ ಎಲ್ಲವನ್ನೂ ತಡೆದುಕೊಂಡು ಬಂದಿದ್ದೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ.ನನಗೆ ಮುಖಂಡರೂ ಬೇಕು.ಕಾರ್ಯಕರ್ತರೂ ಬೇಕು. ಕೆಳ ಮಟ್ಟದಿಂದ ಪಕ್ಷ ಬೆಳೆಸಿದವರೆಲ್ಲರನ್ನೂ ನಾನು ಜೊತೆಗೆ ಕರೆದುಕೊಂಡು ಹೋಗಬೇಕು.ಇಲ್ಲಿ ಯಾರ ವೈಯಕ್ತಿಕ ಪ್ರತಿಷ್ಠೆಯೂ ಇಲ್ಲ.”
ಡಾ.ಚಂದ್ರು ಲಮಾಣಿ.ಶಾಸಕರು.