ಬೆಂಗಳೂರು: ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ್ಟು-ಬೋಲ್ಟು ಟೈಟ್ ಮಾಡುವ ಬಗ್ಗೆ ಆಡಿದ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಸದ್ಯ ಸಿಎಂ ಸಿದ್ಧರಾಮಯ್ಯ ಇಂದು ತಮ್ಮ ಬಜೇಟ್ ನಲ್ಲಿ ಮಲ್ಟಿಪ್ಲೆಕ್ಸ್ ಗಳ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ. ಇದರಿಂದ ಸಿನಿಮಾ ಪ್ರೀಯರಿಗಂತೂ ಅನುಕೂಲ ಆಗಿದೆ.ಆದರೆ ಚಿತ್ರರಂಗದ ಕಲಾವಿದರಿಗೆ ಈ ಆದೇಶ ಎಷ್ಟರ ಮಟ್ಟಿಗೆ ಅನುಕೂಲ ಆಗುತ್ತೆ ಅನ್ನೋದನ್ನ ಅವರೇ ಹೇಳಬೇಕು.
ಸಿಎಂ ಸಿದ್ದರಾಮಯ್ಯ ಇಂದು (ಮಾರ್ಚ್ 07) ದಾಖಲೆಯ 16ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಭಾಷಣ ಓದಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕರ್ನಾಟಕದ ಸಿನಿಮಾ ಪ್ರೇಮಿಗಳ ಬಹುವರ್ಷದ ಬೇಡಿಕೆ ಆಗಿದ್ದ ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಯಂತ್ರಣ ಮಾಡುವ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ನಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು 200 ರೂಪಾಯಿಗೆ ನಿಗದಿಪಡಿಸಿದ್ದಾರೆ.

ನೆರೆ ರಾಜ್ಯಗಳಾದ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಬಹುತೇಕ ದುಪ್ಪಟ್ಟು ಇತ್ತು. ಕೆಲ ಪರಭಾಷೆ ಸಿನಿಮಾಗಳಂತೂ ಕನಿಷ್ಟ ಟಿಕೆಟ್ ದರವನ್ನು 1000 ರೂಪಾಯಿ ಇರಿಸಿ ಸಿನಿಮಾ ಬಿಡುಗಡೆ ಮಾಡಿದ ಉದಾಹರಣೆಗಳೂ ಸಹ ಇವೆ. ಇದರಿಂದ ಕನ್ನಡ ಸಿನಿಮಾಗಳಿಗೆ ದೊಡ್ಡ ಹೊಡೆತ ಬಿದ್ದಿತ್ತು. ಇದೇ ಕಾರಣಕ್ಕೆ ಸಿನಿಮಾ ಮಂದಿ ಸಹ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದ್ದರು.
ಕೆಲ ತಿಂಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸಹ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದರು. ಆಗಲೇ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇತ್ತೀಚೆಗೆ ಸಹ ಸದನದಲ್ಲಿ ಮಲ್ಟಿಫ್ಲೆಕ್ಸ್ ಗಳ ದುಬಾರಿ ಟಿಕೆಟ್ ದರ ನಿಯಂತ್ರಣ ಮೀರಿರುವುದರ ಬಗ್ಗೆ ಚರ್ಚೆಯಾಗಿತ್ತು. ಆಗಲೂ ಸಹ ಸಿದ್ದರಾಮಯ್ಯ ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಇಂದು ಬಜೆಟ್ನಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರಿದ್ದಾರೆ.
ಆದರೆ ಮಲ್ಟಿಪ್ಲೆಕ್ಸ್ಗಳು ರಾಜ್ಯ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈ ಹಿಂದೆ ಸಹ ಇಂಥಹಾ ಪ್ರಯತ್ನಗಳು ನಡೆದಾಗ ಮಲ್ಟಿಪ್ಲೆಕ್ಸ್ಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಬಾರಿ ಮಲ್ಟಿಪ್ಲೆಕ್ಸ್ಗಳು ಏನು ಮಾಡಲಿವೆ ಕಾದು ನೋಡಬೇಕಿದೆ.