ಮುಂಡರಗಿ:
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಮಾರ್ಚ್ 9 ರಂದು ಸೋಮವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಅತ್ಯಂತ ವೈಭವಪೂರಿತವಾಗಿ, ಭಕ್ತಿಭಾವದಿಂದ ಆಚರಿಸಲು ಮುಂಡರಗಿ ತಾಲೂಕು ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಆ ದಿನ ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಆರಂಭವಾಗಲಿದೆ.
ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಿಗ್ಗೆ 11 ಗಂಟೆಗೆ ಶ್ರೀ ಜಗದ್ಗುರು ಶ್ರೀಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಮಂಗಲಗೊಳ್ಳಲಿದೆ.
ಬೆಳಿಗ್ಗೆ 11.30 ಗಂಟೆಗೆ ನಡೆಯುವ ಜಯಂತಿ ಸಮಾರಂಭವು ಪರಮಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.
ಬನ್ನಿಕೊಪ್ಪದ ಶ್ರೀಶ್ರೀಶ್ರೀ 108 ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕಲಕೇರಿ–ವಿರುಪಾಪೂರದ ಶ್ರೀಶ್ರೀಶ್ರೀ 108 ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇವಡ್ಡಟ್ಟಿಯ ಶ್ರೀಶ್ರೀಶ್ರೀ 108 ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಂಪಸಾಗರ ಕಟ್ಟಮನಿ ಹಿರೇಮಠದ ಶ್ರೀಶ್ರೀಶ್ರೀ 108 ರುದ್ರಮುನಿಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಜ.ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿಗಳಾದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೂಜ್ಯರು ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿ.ಜೆ. ಹಿರೇಮಠ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಕಾಂಗ್ರೆಸ್ ಯುವ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾದ ಆನಂದಸ್ವಾಮಿ ಗಡ್ಡದೇವರಮಠ, ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ
ಬೆಂಗಳೂರಿನ ಜಯಶರಣ ಸಂಸ್ಥೆಯ ವ್ಯವಸ್ಥಾಪಕರಾದ ಅನ್ನದಾನಿ ಶಿ. ಹಿರೇಮಠ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಮುಂಡರಗಿ ತಾಲೂಕು ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಿ.ಜೆ. ಹಿರೇಮಠ, ಯುವ ಘಟಕದ ಅಧ್ಯಕ್ಷ ವಿನಯಕುಮಾರ ಬಿ. ಗಂಧದ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಯು. ಹಂಪಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶಗಳು ಸಮಾಜದಲ್ಲಿ ಧಾರ್ಮಿಕತೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿರುವುದರಿಂದ ಸಮಾಜದ ಪ್ರತಿಯೊಂದು ಮನೆಯ ಬಂಧುಬಾಂಧವರು ತನು-ಮನ-ಧನದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಜಂಗಮಾಭಿವೃದ್ಧಿ ಸಂಘಟನೆ ಎಲ್ಲ ಸದಸ್ಯರು ಮನವಿ ಮಾಡಿದ್ದಾರೆ.
