ಗದಗ:ಅದ್ವೈತ ಪರಂಪರೆಯ ಮಠಗಳಲ್ಲೊಂದಾದ ಗದಗನ ಪ್ರತಿಷ್ಠಿತ ಜಗದ್ಗುರು ಶಿವಾನಂದ ಬೃಹನ್ಮಠದ 105 ನೇ ಜಾತ್ರಾ ಮಹೋತ್ಸವ ಇಂದು ನೆರವೇರುತ್ತಿದೆ.
ಇಂದು ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಮಠದ ಪೀಠಾಧಿಪತಿಗಳಾದ ಜ. ಅಭಿನವ ಶಿವಾನಂದ ಮಹಸ್ವಾಮಿಜಿ ನೇತೃತ್ವದಲ್ಲಿ ಈ ವರ್ಷದ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳು ನೆರವೇರುತ್ತಿವೆ. ಹಿರಿಯ ಗುರುಗಳು ಹಾಗೂ ಉತ್ತರಾಧಿಕಾರಿಗಳ ಜಟಾಪಟಿಯಿಂದ ಕಳೆದ ವರ್ಷ ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವಗಳನ್ನ ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ಕೋರ್ಟ್ ಆದೇಶದ ಮೇರೆಗೆ ಮಠದ ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಶ್ರೀಗಳ ನೇತೃತ್ವದಲ್ಲಿಯೇ ಜಾತ್ರಾ ಕಾರ್ಯಕ್ರಮಗಳು ಶಾಂತಿಯುತವಾಗಿ ನೆರವೇರಿದ್ದು, ಉತ್ತರಾಧಿಗಳಾದ ಕೈವಲ್ಯಾನಂದ ಸ್ವಾಮಿಜಿ ಅವರಿಗೆ ಹಿನ್ನೆಡೆ ಆಗಿದೆ.
ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವೆ ವೈಮನಸ್ಸು ಏರ್ಪಟ್ಟಿದ್ದರಿಂದ, ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದ, ಕೈವಲ್ಯಾನಂದ ಶ್ರೀಗಳನ ನೇಮಕವನ್ನ ಹಿರಿಯ ಶ್ರೀಗಳು ರದ್ದುಗೊಳಿಸಿದ್ದರು.

ಇದನ್ನ ಪ್ರಶ್ನಿಸಿ, ಕಿರಿಯ ಶ್ರೀಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಅಂದಿನಿಂದ ಶ್ರೀಮಠದ ಆಡಳಿತಾತ್ಮಕ ವಿಷಯದಲ್ಲಿ ಹಾಗೂ ಕಳೆದ ವರ್ಷದ ಜಾತ್ರಾ ಆಚರಣೆ ಸಂದರ್ಭದಲ್ಲಿ ಇಬ್ಬರ ಶ್ರೀಗಳ ನಡುವೆಯೂ ಜಟಾಪಟಿ ಮುಂದುವರೆದಿತ್ತು. ಕಳೆದ ವರ್ಷ ಇಬ್ಬರು ಶ್ರೀಗಳೂ ಕೂಡಿಕೊಂಡು ಜಾತ್ರಾ ಮಹೋತ್ಸವ ಆಚರಿಸುವಂತೆ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿತ್ತು. ಇದರ ಬೆನ್ನಲ್ಲೆ, ಕಳೆದ ವರ್ಷದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಠದಲ್ಲಿ ಸಾಕಷ್ಟು ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕಾರಣ ಅಡ್ಡಪಲ್ಲಕ್ಕಿ ಹಾಗೂ ರಥೋತ್ಸವದಲ್ಲಿ ಯಾವ ಶ್ರೀಗಳು ಕೂರುತ್ತಾರೆ ಅನ್ನೋ ಚರ್ಚೆ ಸಾಕಷ್ಟು ಸದ್ದು ಮಾಡಿತ್ತು.ಅನೇಕ ದೂರುದೂರುಗಳಿಂದ ಶ್ರೀಮಠದ ಭಕ್ತಾಧಿಗಳು ರಥೋತ್ಸವಕ್ಕೆ ಆಗಮಿಸಿದ್ದರು.
ಆದರೆ ಪೊಲೀಸರ ಮುಂಜಾಗೃತಾ ಫಲವಾಗಿ, ಯಾವುದೇ ಅಹಿತಕರ ಘಟನೆ, ವ ಗಲಾಟೆ ನಡೆಯುವ ಸಂಭವ ಹೆಚ್ಚಳವಾಗಿದ್ದರಿಂದ, ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವವನ್ನ ರದ್ದುಗೊಳಿಸಲಾಗಿತ್ತು.ಇದರಿಂದ ಜಾತ್ರೆಗೆ ಬಂದ ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಳ್ಳದೇ ನಿರಾಶೆಯಿಂದ ವಾಪಾಸ್ ಆಗಿದ್ದರು.
ಆದರೆ ಈ ಬಾರಿ ಇಂಥಹ ಯಾವುದೇ ಆಚರಣೆಗಳು ರದ್ದುಗೊಳ್ಳದೇ ಶಾಂತಿಯುತವಾಗಿ ಜಾತ್ರಾ ಮಹೋತ್ಸವ ನೆರವೇರುತ್ತಿದ್ದು, ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಶ್ರೀಗಳ ಸಾನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ನೆರವೇರಿವೆ.
ಕಾರಣ ಉತ್ತರಾಧಿಕಾರಿಯಾಗುವ ಕೈವಲ್ಯಾನಂದ ಸ್ವಾಮೀಜಿ ಅವರಿಗೆ ಮಠದ ಕಾರ್ಯಚಟವಟಿಕೆಗೆ ತೊಂದರೆ ಕೊಡದೆ ಕೇವಲ ಭಕ್ತನಾಗಿ ಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಹೈ ಕೋರ್ಟ ದೇಶಿಸಿದೆ.
ಈಗಾಗಲೇ ಶಿವಾನಂದ ಬೃಹನ್ಮಠದಿಂದ ಕೈವಲ್ಯಾನಂದ ಸ್ವಾಮೀಜಿ ಅವರನ್ನು ವಜಾಗೊಳಿಸಲಾಗಿದ್ದು, ವಜಾಗೊಳಿಸಿರುವುದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.ಸದ್ಯ ಈ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯುತ್ತಿದೆ.
ಸಧ್ಯ ಹಿರಿಯ ಜ.ಅಭಿನವ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ ಎಂದು ವಕೀಲ ಎಂ.ಬಿ.ಪಾಟೀಲ ಹೇಳಿದ್ದಾರೆ.