ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ವಿಐಪಿ (VIP) ಸಂಚಾರದ ವೇಳೆ ಸೈರನ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಗಣ್ಯರ ಕಾರುಗಳ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಿಗೆ ಸೈರನ್ ಬಳಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಡಾ. ಎಂ.ಎ. ಸಲೀಂ ಅವರು ಇಂದು (ಜುಲೈ 21) ಮಹತ್ವದ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ಸೈರನ್ ಬಳಕೆಯಿಂದ ಗಣ್ಯ ವ್ಯಕ್ತಿಗಳು ಸಂಚರಿಸುತ್ತಿರುವ ದಿಕ್ಕು ಹಾಗೂ ಸ್ಥಳದ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ಹರಡುವ ಸಾಧ್ಯತೆಯಿದ್ದು, ಅದು ಅವರ ಭದ್ರತೆಗೆ ಅಪಾಯವಾಗಬಹುದು ಎಂಬ ಕಾರಣವನ್ನೂ ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅತಿವೇಗ ಹಾಗೂ ಅಡ್ಡಾದಿಡ್ಡಿ ಚಲನೆಯೊಂದಿಗೆ ಸೈರನ್ ಬಳಸುವ ಮೂಲಕ ರಸ್ತೆ ಮೇಲೆ ಇತರ ವಾಹನಗಳ ಚಾಲಕರಿಗೆ ತೊಂದರೆ ಉಂಟಾಗುತ್ತಿದ್ದು, ಕೆಲವೊಮ್ಮೆ ಬೆಂಗಾವಲು ವಾಹನಗಳು ಅಪಘಾತಕ್ಕೆ ಒಳಗಾಗುವ ಪರಿಸ್ಥಿತಿಯೂ ಉಂಟಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ವಿಐಪಿ ಸಂಚಾರದ ವೇಳೆ ವಾಹನಗಳಲ್ಲಿ ಸೈರನ್ ಬಳಸುವಿಕೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ವೈಯಕ್ತಿಕ ಅಥವಾ ಅಧಿಕೃತ ಸಂಚಾರ ಸಂದರ್ಭದಲ್ಲಿ ತುರ್ತು ಮಾಹಿತಿ ವಿನಿಮಯವನ್ನು ಸೈರನ್ ಬಳಕೆ ಮೂಲಕವಲ್ಲ, ಬದಲಿಗೆ ವೈರ್ಲೆಸ್ ಸಂಪರ್ಕ ವ್ಯವಸ್ಥೆ ಮುಖಾಂತರ ನಡೆಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಸೈರನ್ ಬಳಕೆಗೆ ಸ್ಪಷ್ಟ ಮಾರ್ಗಸೂಚಿಗಳು:
ಡಿಜಿ, ಐಜಿಪಿ ಎಂ.ಎ. ಸಲೀಂ ಅವರು ತಮ್ಮ ಆದೇಶದಲ್ಲಿ, ಕೇವಲ ತುರ್ತು ಸೇವೆಗಳಾದ ಅಂಬ್ಯುಲೆನ್ಸ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ವಾಹನಗಳು ಮಾತ್ರ ತುರ್ತು ಸಂದರ್ಭಗಳಲ್ಲಿ ಸೈರನ್ ಬಳಸಬಹುದಾಗಿದೆ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಪ್ರಕಾರವೂ, ತುರ್ತು ಸೇವೆಗಳ ಹೊರತು ಪಡಿಸಿ ಇನ್ಯಾರೂ ಸೈರನ್ ಬಳಸುವಂತಿಲ್ಲ. ಈ ನಿಯಮ ಪಾಲನೆ ಮಾಡದೇ ಇದ್ದರೆ, ಮೋಟಾರ್ ವಾಹನ ಕಾಯ್ದೆ 190(2)ರ ಪ್ರಕಾರ ದಂಡ ವಿಧಿಸಲಾಗುವುದು. ಜೊತೆಗೆ, ಮೂರು ತಿಂಗಳು ಜೈಲು ಶಿಕ್ಷೆ ವಿಧಿಸುವವೂ ಸಾಧ್ಯವಿದೆ ಎಂದು ಎಚ್ಚರಿಸಲಾಗಿದೆ.
ಸಾರಾಂಶವಾಗಿ, ಈ ಹೊಸ ಆದೇಶದ ಮೂಲಕ ಶಬ್ದ ಮಾಲಿನ್ಯ ಕಡಿಮೆಗೊಳಿಸುವುದರ ಜೊತೆಗೆ ವಿಐಪಿಗಳ ಭದ್ರತೆ, ಸಾರ್ವಜನಿಕರ ಸುರಕ್ಷತೆ ಮತ್ತು ರಸ್ತೆ ಶಿಸ್ತು ಈ ಎಲ್ಲ ಕ್ಷೇತ್ರಗಳಿಗೂ ಬಲ ನೀಡಲಾಗಿದೆ. ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಈ ಕ್ರಮ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಹೆಜ್ಜೆ ಎಂದು ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.