ಕಾಂತಾರ -2 ಚಿತ್ರತಂಡಕ್ಕೆ ವಿಘ್ನ ಎದುರಾಗಿದೆ. ಕಾಂತಾರ-2 ಚಿತ್ರತಂಡ ಷರತ್ತು ಉಲ್ಲಂಘಿಸಿರುವ ಬಗ್ಗೆ ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಿತ್ರೀಕರಣದ ವೇಳೆ ಷರತ್ತು ಉಲ್ಲಂಘಿಸಿದ ದೂರು ಕೇಳಿ ಬಂದ ಹಿನ್ನೆಲೆ ಈ ಅದೇಶ ನೀಡಿದ್ದಾರೆ. ಒಂದು ವೇಳೆ ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಚಿತ್ರೀಕರಣದ ವೇಳೆ ಯಾವುದೇ ಹಾನಿಯಾಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಖಂಡ್ರೆ ಖಡಕ್ ಆದೇಶ ಮಾಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಬಿಗ್ ಶಾಕ್ ನೀಡಿದ್ದಾರೆ.

ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿನಯದ ಸೀಕ್ವೆಲ್ ಕಾಂತಾರ-2 ಅಕ್ಟೋಬರ್ 2 ನೇ 2025 ರಂದು ವಿಶ್ವದಾದ್ಯಂತ ಬಿಡುಗಡೆ ಅಗಲು ಸಜ್ಜಾಗಿದೆ.ಆದರೆ ಚಿತ್ರೀಕರಣದ ಹೆಸರಿನಲ್ಲಿ ಅರಣ್ಯ ಪ್ರದೇಶಕ್ಕೆ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಚಿತ್ರೀಕರಣ ನಡೆಯುತ್ತಿರುವ ಸಕಲೇಶಪುರ ತಾಲ್ಲೂಕಿನ ಗವಿಗುಡ್ಡಕ್ಕೆ ಎಸಿಎಫ್ ಸತೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕೆಲವೊಂದು ನಿಯಮಗಳನ್ನು ಚಿತ್ರೀಕರಣದ ವೇಳೆ ಉಲ್ಲಂಘಿಸಿರುವುದು ಕಂಡುಬಂದಿದ್ದು, ಮೇಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಕಾಂತಾರ-2 ಸಿನಿಮಾದ ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕಾಗಿ ಪರವಾನಿಗೆ ಪಡೆದುಕೊಂಡಿರುವ ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಿನಿಮಾ ಚಿತ್ರೀಕರಣಕ್ಕೆ ಯಾವೆಲ್ಲಾ ಪರವಾನಿಗೆ ನೀಡಿದ್ದಾರೆ ಎಂಬುವುದರ ಬಗ್ಗೆ ಅರಣ್ಯ ಬಹಿರಂಗಪಡಿಸಬೇಕು. ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದರು.