ಗದಗ:
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಎನ್ನಲಾದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸುಮಾರು ಒಂದು ಕೋಟಿ ರೂಪಾಯಿ ಮೊತ್ತದ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಆಪ್ತ ಸಹಾಯಕರು 11 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ ಮೊದಲ ಹಂತವಾಗಿ ಐದು ಲಕ್ಷ ಲಂಚ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದೆ.
ಶಾಸಕರ ಆಪ್ತ ಸಹಾಯಕ ಮಂಜು ವಾಲ್ಮೀಕಿ ಗುತ್ತಿಗೆದಾರ ವಿಜಯ ಪೂಜಾರ ಅವರಿಂದ 5 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಮಂಜು ವಾಲ್ಮೀಕಿ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದು, ತನ್ನ ಬಳಿ ಇದ್ದ ಲಂಚದ ಹಣವನ್ನು ಬಾಲಾಜಿ ಆಸ್ಪತ್ರೆಯ ಹಿಂಭಾಗದಲ್ಲಿನ ಶಾಲಾ ಕಂಪೌಂಡಿನಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.
ಆದರೆ ಈ ವೇಳೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸ್ ತಂಡ ಮಂಜು ವಾಲ್ಮೀಕಿಯನ್ನು ಬೆನ್ನಟ್ಟಿ ವಶಕ್ಕೆ ಪಡೆದಿದೆ.ಈ ವೇಳೆ, ಶಾಸಕ ಚಂದ್ರು ಲಮಾಣಿ, ಕಾರ್ಯಕರ್ತರ ಸಭೆ ಮುಗಿಸಿಕೊಂಡು, ಆಸ್ಪತ್ರೆಯಿಂದ ಹೊರಗಡೆ ಹೊರಟಾಗ,ಲೋಕಾಯುಕ್ತ ಪೊಲೀಸರು ಶಾಸಕರಿಗೆ ಎದುರಾಗಿದ್ದಾರೆ.ನಂತರ ಶಾಸಕ ಚಂದ್ರು ಲಮಾಣಿ, ಹಾಗೂ ಅವರ ಖಾಸಗಿ ಆಪ್ತ ಸಹಾಯಕರನ್ನ ಒಳಗೆ ಕರೆಯಿಸಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಎಸೆಯಲ್ಪಟ್ಟಿದ್ದ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದು, ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣವು ಶಾಸಕ ಡಾ.ಚಂದ್ರು ಲಮಾಣಿ ಅವರ ವಿರುದ್ಧ ಗಂಭೀರ ಆರೋಪಗಳಿಗೆ ಕಾರಣವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಶಾಸಕರ ಪಾತ್ರದ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ.
ತನಿಖೆಯ ಮುಂದಿನ ಹಂತದಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.
ಲೋಕಾಯುಕ್ತ ದಾಳಿಗೆ ರಾಜಕೀಯ ಬಣ್ಣ?
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಪ್ರಕರಣ ಜಿಲ್ಲೆಯಲ್ಲಿ ಜಿದ್ದಾಜಿದ್ದಿಗೆ ನಾಂದಿ..!
ಗದಗ:
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಆಪ್ತನ ಮೇಲಿನ ಲಂಚದ ಪ್ರಕರಣ ಇದೀಗ ಕೇವಲ ಕಾನೂನು ವಿಚಾರಕ್ಕೆ ಸೀಮಿತವಾಗದೆ, ಗದಗ ಜಿಲ್ಲೆಯಲ್ಲಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಶಾಸಕರ ಆಪ್ತ ವರ್ಗ ಹಾಗೂ ಭಾರತೀಯ ಜನತಾ ಪಕ್ಷ ಮುಖಂಡರು, ಲೋಕಾಯುಕ್ತ ದಾಳಿಯನ್ನು ರಾಜಕೀಯ ವೈರತ್ವದ ಫಲ ಎಂದು ಆರೋಪಿಸುವ ಮೂಲಕ, ಈ ಪ್ರಕರಣಕ್ಕೆ ಕಾಂಗ್ರೆಸ್ ಹುನ್ನಾರ ಎಂಬ ಲೇಪನ ಹಚ್ಚಿದ್ದಾರೆ.
ಇತ್ತೀಚೆಗೆ ಬೆಳ್ಳಟ್ಟಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಶಾಸಕ ಚಂದ್ರು ಲಮಾಣಿ ಅವರು, ವೇದಿಕೆಯಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಅವರ ಭಾಷಣದ ವಿರುದ್ಧ ವೇದಿಕೆಯಲ್ಲೇ ಸ್ವತಃ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ವಿಧಾನಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದ ಅವಧಿಯಲ್ಲಿ ಕ್ಷೇತ್ರದ ಸಮಸ್ಯೆಗಳ ವಿಚಾರವಾಗಿ ಆಡಳಿತ ಪಕ್ಷದ ಸಚಿವರ ವಿರುದ್ಧ ಶಾಸಕರು ಪದೇಪದೇ ನೇರ ವಾಗ್ವಾದಕ್ಕಿಳಿದಿದ್ದರು.
ಅಷ್ಟೇ ಅಲ್ಲದೆ, ಇತ್ತೀಚೆಗೆ ಕ್ಷೇತ್ರದ ಅಭಿವೃದ್ಧಿ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೂ ನೇರ ಮುಖಾಮುಖಿ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಎಲ್ಲಾ ಬೆಳವಣಿಗೆಗಳೇ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಖೆಡ್ಡಾಗೆ ಬೀಳಿಸಲು ಕಾರಣವಾಯಿತೇ? ಅಧಿವೇಶನದಲ್ಲಿ ಪದೇಪದೇ ಎದ್ದು ನಿಂತು ಪ್ರಶ್ನೆ ಕೇಳಿದ್ದೇ ಅವರಿಗೆ ಮುಳುವಾಯಿತೇ? ಎಂಬ ಪ್ರಶ್ನೆಗಳು ಇದೀಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಈ ನಡುವೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುತ್ತಿರುವ ಬಿಜೆಪಿ ಮುಖಂಡರು, ಲೋಕಾಯುಕ್ತ ದಾಳಿಯ ಹಿಂದೆ ನೇರಾನೇರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಇತ್ತ, ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡವಿಲ್ಲದೆ ಕಾನೂನು ಪ್ರಕ್ರಿಯೆಯಂತೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ, ಶಾಸಕರೊಂದಿಗೆ ಅವರ ಖಾಸಗಿ ಆಪ್ತಸಹಾಯಕರಾದ ಮಂಜು ವಾಲ್ಮೀಕಿ ಹಾಗೂ ಗುರು ಲಮಾಣಿ ಅವರನ್ನು ಲಕ್ಷ್ಮೇಶ್ವರದ ಬಾಲಾಜಿ ಆಸ್ಪತ್ರೆಯಲ್ಲಿ ಕೂರಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಸಂಪೂರ್ಣ ತನಿಖೆ ಮುಗಿದ ಬಳಿಕವೇ ಪ್ರಕರಣದ ನಿಖರ ಸತ್ಯಾಂಶ ಹೊರಬೀಳಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಮೇಲಿನ ಲೋಕಾಯುಕ್ತ ದಾಳಿಯು ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಜಿದ್ದಾಜಿದ್ದಿಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿಯೂ ದೊಡ್ಡ ಪ್ರತಿಫಲನ ಮೂಡಿಸುವ ಸಾಧ್ಯತೆ ಇದೆ.
