ಮಹಾಶಿವರಾತ್ರಿ ದಿನದಂದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ ಪ್ರಕರಣ ಹಾಗೂ ಆ ಘಟನೆ ಮಾಸುವ ಮುನ್ನವೆ, ಎರೆಡ್ಮೂರು ದಿನದ ಅಂತರದಲ್ಲಿ ಬಾಗೇವಾಡಿ ಸಮೀಪದ ಮಲ್ಲಿಕಾರ್ಜುನಪುರದ ಕಣವಿ ಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗು ಧ್ವಂಸ ಹಾಗೂ ಆದರಳ್ಳಿಯ ಮರಿಯಮ್ಮ ದೇವಿ ಮುಖವನ್ನ ಸಂಪೂರ್ಣವಾಗಿ ಧ್ವಂಸ ಮಾಡಿದ್ದ ಪ್ರಕರಣಗಳು ಹಿಂದೂ ಧರ್ಮದ ಅಸಂಖ್ಯಾತ ಭಾವನೆಗಳಿಗೆ ತೀವ್ರ ಧಕ್ಕೆಯುಂಟು ಮಾಡಿದ್ದವು.
🖋ವರದಿ:ಮಹಲಿಂಗೇಶ ಹಿರೇಮಠ. ಗದಗ
ಶಿವರಾತ್ರಿಯಂದೇ ಶಿಂಗಟಾಲೂರಿನ ತುಂಗಭದ್ರಾ ನದಿ ದಂಡೆಯಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಶಿವಲಿಂಗು,ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ಮೂರ್ತಿಗಳನ್ನ ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಜನಮನದಲ್ಲಿ ಆಘಾತ ಮೂಡಿಸಿತ್ತು. ಘಟನೆ ನಡೆದ ದಿನವೇ, ಗದಗ ಎಸ್ಪಿ ರೋಹನ್ ಜಗದೀಶ ಸ್ಥಳಕ್ಕೆ ಭೇಟಿ ನೀಡಿ ದುಷ್ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನ ಆದಷ್ಟು ಬೇಗ ಪತ್ತೆಹಚ್ಚಲಾಗುವದು ಎಂದು ಭರವಸೆ ನೀಡಿದ್ದರು.ಇನ್ನು ಹಲವು ಹಿಂದೂ ಮುಖಂಡರು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಪೊಲೀಸ್ ಇಲಾಖೆ, ಟವರ್ ಲೊಕೇಶನ್ ಮೂಲಕ ಈಘಟನೆಗೆ ಕಾರಣರದವರನ್ನ ಆದಷ್ಟು ಬೇಗ ಪತ್ತೆ ಮಾಡಿ, ಕೋಮುಗಲಭೆ ಸೃಷ್ಟಿಸುವ ಈ ದುಷ್ಕರ್ಮಿಗಳನ್ನ ಬೇಗನೇ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದ್ದರು.
ಹೀಗೆ, ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನ ಪತ್ತೆ ಹಚ್ಚೋಕೆ ಗದಗ ಎಸ್ಪಿ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಯಶವಂತ ಬಿಸ್ನಳ್ಳಿ ಅವರ ಸೂಚನೆ ಮೇರೆಗೆ, ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ಬಲೆಬೀಸಿತ್ತು.
ಆದರೆ ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ್ದವರ ಬೆನ್ನುಬಿದ್ದಿದ್ದ ಖಾಕಿ ಪಡೆಗೆ, ಸಿಕ್ಕಿದ್ದು ಕಿಡಿಗೇಡಿಗಳಲ್ಲ. ಬದಲಾಗಿ ತುಂಗಭದ್ರಾ ನದಿ ಒಡಲನ್ನ ರಾತ್ರೋ ರಾತ್ರಿ ಬಗೆದು, ಅಲ್ಲಿನ ಅಮೂಲ್ಯ ಪ್ರಕೃತಿ ಸಂಪತ್ತಾದ ಮರಳು ದೋಚುವ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೌದು, ಮೂರ್ತಿಗಳ ಧ್ವಂಸ ನಡೆದ ಸ್ಥಳದಲ್ಲಿ ಟವರ್ ಲೋಕೆಶನ್ ಹಾಕಿ CDR ಮೂಲಕ ಆರೋಪಿಗಳ ಜಾಲ ಹಿಡಿದಾಗ, ಅಲ್ಲಿ ಸಿಕ್ಕಿದ್ದು ಮರಳುಗಳ್ಳರು…!
ಮೂರ್ತಿಗಳ ಧ್ವಂಸ ಕೃತ್ಯ ನಡೆದ ದಿನದಂದು ಹಿಂದಿನ ರಾತ್ರಿ ಈ ಮರಳುಗಳ್ಳರು ತುಂಗಭದ್ರ ನದಿ ತೀರದಲ್ಲಿ ನದಿ ಒಡಲು ಬಗೆದು ಅಕ್ರಮ ಮರಳನ್ನ ಸಾಗಾಟ ಮಾಡಿದ್ದು, ಪೊಲೀಸರು ಕಿಡಿಗೇಡಿಗಳನ್ನ ಪತ್ತೆ ಹಚ್ಚಲು ಮುಂದಾದಾಗ, ಆ ಸ್ಥಳದಲ್ಲಿ ಹಲವು ಜನ ಮರಳುಗಳ್ಳರ ಲೊಕೇಶನ್ ತೋರಿಸಿದೆ. ನಂತರ ಪೊಲೀಸ್ ಠಾಣೆಗೆ ಕರೆಯಿಸಿ, ಆ ಸ್ಥಳದಲ್ಲಿ ರಾತ್ರಿ ಏನುಕೆಲಸ ನಿಮಗೆ ಎಂದು ವಿಚಾರಿಸಿದಾಗ, ಸಿಕ್ಕ ಎಲ್ಲಾ ಆರೋಪಿಗಳು ಒಪ್ಪಿಕೊಂಡಿದ್ದು ಅಕ್ರಮ ಮರಳು ಸಾಗಾಟ.ಆದರೆ ಇವರಲ್ಲಿ ಯಾರೊಬ್ಬರು, ಮೂರ್ತಿಗಳ ಧ್ವಂಸ ಕೃತ್ಯಕ್ಕೆ ಕಾರಣಾಗಿಲ್ಲ. ಆದರೆ ಪೊಲೀಸರು ಮಾತ್ರ, ಹಂಗೋ ಹಿಂಗೋ, ಏನೋ ಹುಡಕಲು ಹೋಗಿ ಇನ್ನೆನೋ ಸಿಕ್ಕಿದೆ ಎನ್ನುವ ಹಾಗೆ, ಸಿಕ್ಕ ಮರಳುಗಳ್ಳರ ವಿರುದ್ಧ ಪ್ರಕರಣ ದಾಖಲಿಸುವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಮರಳಗಳ್ಳರಷ್ಟೇ ಅಲ್ಲ..ಮರಳೂ ಇದೆ..!
ಹೌದು, ಶಿಂಗಟಾಲೂರು ಗ್ರಾಮದಲ್ಲಿ ಇದೀಗ ನಡೆದ ಮೂರ್ತಿಗಳ ಧ್ವಂಸ ಪ್ರಕರಣ, ಮರಳುಗಳ್ಳರ ಪತ್ತೆಯಾಗುವಂತೆ ಮಾಡಿದೆ. ಸಿಂಗಟಾಲೂರು
ಶಿರನಹಳ್ಳಿ
ಗಂಗಾಪೂರ
ಕೊರ್ಲಹಳ್ಳಿ
ಕಕ್ಕೂರು ತಾಂಡೆ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ, ಸುಮಾರು 250 ರಿಂದ 300 ಟ್ರಿಪ್‌ಗಳಷ್ಟು ಅಕ್ರಮ ಮರಳು ಸಂಗ್ರಹ ಮಾಡಲಾಗಿದೆ.ಆಯಾ ಗ್ರಾಮಗಳ ಹಲವು ಕಡೆಗಳಲ್ಲಿ, 2-3 ಟ್ರ್ಯಾಕ್ಟರ್ ಗಳಷ್ಟು ಅಕ್ರಮವಾಗಿ ಅಲ್ಲಲ್ಲಿ ಶೇಖರಿಸಿಡಲಾಗಿದೆ ಎನ್ನುವ ಆರೋಪವಿದೆ. ಆದರೆ ತಾಲೂಕಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಮತ್ತು ಪೊಲೀಸ್ ಅಧಿಕಾರಿಗಳಿಗೆ ಇಷ್ಟೆಲ್ಲ ಅಕ್ರಮ ಮರಳು ಅಡ್ಡೆಗಳ ಮಾಹಿತಿ ಇದ್ದರೂ, ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವದು ಅಧಿಕಾರಿಗಳ ಮೇಲಿನ ಅನುಮಾನ, ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದೆ ಎನ್ನುವದು ಹೋರಾಟಗಾರರ ಆರೋಪವಾಗಿದೆ.
ಜಿಲ್ಲಾಧಿಕಾರಿಗಳ ದಾಳಿ..!
ಈ ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ತಂಡ, ನದಿ ಪಾತ್ರದ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮರಳು ಅಡ್ಡೆಗಳ ಮೇಲೆ ದೀಢೀರ್ ದಾಳಿ ನಡೆಸಿ,ಅಪಾರ ಪ್ರಮಾಣದ ಮರಳನ್ನ ವಶಪಡಿಸಿಕೊಂಡು, ಮರಳುಗಳ್ಳರ ಮೇಲೆ ಕೇಸ್ ದಾಖಲಿಸಿ, ಬಿಸಿ ಮುಟ್ಟಿಸಿದ್ದರು.ಆದರೆ ಇದೀಗ ಮರಳುಗಳ್ಳರ ಹಳೇ ಚಾಳಿ ಮತ್ತೆ ಮುಂದುವರೆದಿದ್ದು, ಪುನಃ ಜಿಲ್ಲಾಡಳಿತ, ದಾಳಿ ನಡೆಸಿ,ಮರಳನ್ನ ವಶಪಡಿಸಿಕೊಂಡಲ್ಲಿ, ಕನಿಷ್ಟಪಕ್ಷ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ರಾಜಧನ ಸಂಗ್ರಹವಾಗುತ್ತದೆ. ಇತ್ತ ತಾಲೂಕಾಡಳಿತವಾದರೂ ಈ ಬಗ್ಗೆ ಚಕಾರ ಎತ್ತದಿರುವದು, ಯಾಕೆ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಅದೇನೆ ಇರಲಿ, ಹಿಂದೂ ದೇವರ ಮೂರ್ತಿಗಳ ಭಗ್ನಗೊಳಿಸಿದ ಆರೋಪಿಗಳನ್ನ ಹುಡಕಲು ಹೊರಟ ಪೊಲೀಸರಿಗೆ, ಮತ್ತೊಂದು,ಅಕ್ರಮದ ಆರೋಪಿಗಳಂತೂ ಬಲೆಗೆ ಬಿದ್ದಿರುವದಂತು ಎಷ್ಟು ಸತ್ಯವೋ, ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ಅಡ್ಡೆಗಳನ್ನ ಮಾಡಿಕೊಂಡಿರುವದು ಅಷ್ಟೇ ಸತ್ಯ. ಸಾಮಾಜಿಕ ಜಾಲಾತಾಣಗಳಲ್ಲಿಯೂ ಸಹ ಹಲವು ಪಕ್ಷಗಳ ಕಾರ್ಯಕರ್ತರು, ಹಾಗೂ ಹೋರಾಟಗಾರರು ಈ ಅಕ್ರಮ ದಂಧೆ ಬಗ್ಗೆ ಪೋಸ್ಟ್ ಹಾಕುತ್ತಲೇ,ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.ಆದರೆ ಏನೂ ಪ್ರಯೋಜನವಾಗಿಲ್ಲ.
ಇನ್ನಾದರೂ, ಸಂಬಂಧಿಸಿದ ಅಧಿಕಾರಿಗಳು ಸರಿಯಾದ ಕಾರ್ಯಾಚರಣೆ ನಡೆಸಿ, ಮರಳುಗಳ್ಳರ ಮಟ್ಟ ಹಾಕುವಂತಾಗಲಿ ಹಾಗೂ ಹಿಂದೂ ದೇವರ ಮೂರ್ತಿಗಳ ಧ್ವಂಸ ಮಾಡಿದವರನ್ನ ಬೇಗ ಪತ್ತೆ ಹಚ್ಚುವಂತಾಗಲಿ ಅನ್ನೋದು ಜಿಲ್ಲೆಯ ಜನರ ಆಗ್ರಹವಾಗಿದೆ.
