ಮುಂಡರಗಿ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮುಂಡರಗಿ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ‘ಸೌರಭ’ ಇವುಗಳ ಸಂಯುಕ್ತ ಆಶ್ರಯದಲ್ಲಿ ೭ ನೇ ಶರಣ ಚಿಂತನ ಮಾಲಿಕೆ ಜರುಗಿತು.
ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಎ.ವೈ ನವಲಗುಂದ ಅವರು ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು,ನುಡಿದಂತೆ ನಡೆದ ಶರಣರು ಗೃಹಸ್ಥಾಶ್ರಮದಲ್ಲಿ ಕೂಡ ವೈಚಾರಿಕ ಬದುಕನ್ನು ನಡೆಸಿದರು. ಅವರ ನಡೆ-ನುಡಿಗಳಲ್ಲಿ ಯಾವುದೇ ರೀತಿಯ ಬೇಧ ಇರಲಿಲ್ಲ. ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಶರಣರಲ್ಲಿ ನಗೆ ಮಾರಿ ತಂದೆ ತನ್ನ ಅಗಾಧ ಜೀವನ ಪ್ರೀತಿ ಮತ್ತು ಹಾಸ್ಯ ಪ್ರಜ್ಞೆಯಿಂದ ಪ್ರಸಿದ್ಧಿಯನ್ನು ಹೊಂದಿದ್ದರು. ಅವರು ಚುಚ್ಚು ಮಾತುಗಳನ್ನಾಡದೆ, ಮೆಚ್ಚು ಮಾತುಗಳನ್ನಾಡುವವರಾಗಿದ್ದರು ಎಂದು ಹೇಳಿದರು.
ಶರಣರು ತಾತ್ವಿಕ ತಳಹದಿಯ ಮೇಲೆ ಸಮಾಜವನ್ನು ಕಟ್ಟಿದರು. ಶರಣರಲ್ಲಿ ಹಾಸ್ಯಪ್ರಜ್ಞೆಯೂ ಇತ್ತು ಎಂಬುದಕ್ಕೆ ಸಾಕ್ಷಿ ಅವರಲ್ಲಿ 61 ಕ್ಕೂ ಹೆಚ್ಚು ಜನ ನಗೆ ಮಾರಿಗಳು ಇದ್ದರು. ಅಂದಿನ ಕಲ್ಯಾಣದ ಏಳುನೂರ ಎಪ್ಪತ್ತು ಗಣಂಗಳಲ್ಲಿ ನಗಿಸುವ ಕಾಯಕವನ್ನು ಮಾಡುತ್ತಿದ್ದ ಇವರ ಶೈಲಿ ಜಾನಪದ ಮೂಲದ್ದಾಗಿತ್ತು ಎಂದು ಹೇಳಿದರು.
ನಗೆ ಮಾರಿ ತಂದೆಯ ಜೀವನ ದೃಷ್ಟಾಂತಗಳನ್ನು ತಮ್ಮ ಉಪನ್ಯಾಸದಲ್ಲಿ ಕಣ್ಣಿಗೆ ಕಟ್ಟುವಂತೆ ಅಳವಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ನೀಲಪ್ಪ ಹಕ್ಕಂಡಿ ಬಣ್ಣಿಸಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ, ಆರ್.ಎಲ್.ಪೊಲೀಸ್ ಪಾಟೀಲ್ ಅವರು ಮಾತನಾಡಿ, ಶಿವಶರಣರು ತಮ್ಮ ಬದುಕಿನ ಕುರಿತ ಐತಿಹಾಸಿಕ ದಾಖಲೆಗಳನ್ನು, ವಿವರಗಳನ್ನು ಬಿಟ್ಟು ಹೋಗದೆ ಇದ್ದರೂ ವಚನಗಳೆಂಬ ಮಹಾಸಂಪತ್ತನ್ನು ನಮಗೆ ಕೊಡ ಮಾಡಿದ್ದಾರೆ.ಸಮಾಜದ ಸರ್ವ ವರ್ಗವನ್ನು ಸಮಾನತೆಯ ಹಾದಿಯಲ್ಲಿ ನಡೆಸಿದರು. ಶರಣ ಚಿಂತನ ಮಾಲಿಕೆಯ ಉಪೇಕ್ಷಿತ ವಚನಕಾರರ ಸರಣಿಯಲ್ಲಿನ ನಗೆ ಮಾರಿ ತಂದೆ ಸುಮಾರು 88 ವಚನಗಳನ್ನು ರಚಿಸಿದ್ದು ಮನುಷ್ಯ ತನ್ನ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ನಿಲುವನ್ನು ಹೊಂದಿದ್ದರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಜಿ ಗಚ್ಚಣ್ಣವರ್ ಎಲ್ಲರನ್ನೂ ಸ್ವಾಗತಿಸಿ ಕನ್ನಡ ಸಾಹಿತ್ಯ ಪರಿಷತ್ತು ಭವನವು ಶೀಘ್ರದಲ್ಲಿಯೇ ಸಂಪೂರ್ಣ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
ಪ್ರತಿ 15 ದಿನಗಳಿಗೊಮ್ಮೆ ಸೋಮವಾರದ ದಿನ ಶರಣ ಚಿಂತನ ಮಾಲಿಕೆಯಲ್ಲಿ ಉಪೇಕ್ಷಿತ ವಚನಕಾರರ ಕುರಿತು ಉಪನ್ಯಾಸ ನಡೆಯುತ್ತಿದ್ದು ಇದೀಗ ಏಳನೆಯ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವೀಣಾ ಹೇಮಂತ್ ಗೌಡ ಪಾಟೀಲ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಕ್ಕಮ್ಮ ಕೊಟ್ಟೂರ್ ಶೆಟ್ಟರ್, ಜಯಶ್ರೀ ಅಳವಂಡಿ,ರತ್ನಾ ಕಾಗನೂರಮಠ, ಕಾವೇರಿ ಬೋಲಾ, ಮಂಗಳ ಇಟಗಿ, ಮಾನಸ ಅಳವಂಡಿ, ವಾಸಂತಿ ಯಾಳಗಿ, ಮಧುಮತಿ ಇಳಕಲ್, ಡಾ.ನಿಂಗು ಸೊಲಗಿ, ಎಮ್.ಎಸ್.ಹೊಟ್ಟಿನ್ ವಿ ಎಫ್ ಅಂಗಡಿ,ವಿ ಜೆ ಹಿರೇಮಠ, ಲಿಂಗರಾಜ್ ದಾವಣಗೆರೆ,ಎಂ ಐ ಮುಲ್ಲಾ, ಕೃಷ್ಣ ಸಾಹುಕಾರ, ಮಹೇಶ್ ಎಚ್ ಎಸ್, ಗುಬ್ಬಿಯವರ್ ಸೇರಿದಂತೆ ಅನೇಕರು ಹಾಜರಿದ್ದರು