ಗದಗ, ಏಪ್ರಿಲ್ 18: ರಾಜ್ಯ ಸರ್ಕಾರ ಜಾರಿಗೆ ತಯಾರಿ ನಡೆಸುತ್ತಿರುವ ಕಾಂತರಾಜ ಹೆಗ್ಗಡೆ ಆಯೋಗದ ಜಾತಿಗಣತಿ ಸಮೀಕ್ಷಾ ವರದಿಗೆ ಕುರಹಿನಶೆಟ್ಟಿ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಮಾಜದ ಜನಸಂಖ್ಯೆಯ ಅಂಕಿಅಂಶಗಳಲ್ಲಿ ತಾತ್ವಿಕ ಹಾಗೂ ಆಧಾರರಹಿತ ತಪ್ಪುಗಳಿವೆ ಎಂದು ಸಮಾಜದ ಪೀಠಾಧ್ಯಕ್ಷರಾದ ಶ್ರೀ ನೀಲಕಂಠ ಪಟ್ಟದಾರ್ಯ ಮಹಸ್ವಾಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕಾಂತರಾಜ ಹೆಗ್ಗಡೆ ಆಯೋಗದ ವರದಿಯಲ್ಲಿ ಕುರಹಿನಶೆಟ್ಟಿ ಸಮಾಜದ ಜನಸಂಖ್ಯೆಯನ್ನು ಕೇವಲ 1.5 ಲಕ್ಷ ಎಂದೇ ಉಲ್ಲೇಖಿಸಲಾಗಿದೆ. ಆದರೆ ನಾನು ಸಮಾಜದ ಮೂಲ ಪೀಠದ ಪೀಠಾಧ್ಯಕ್ಷನಾಗಿ ಕಳೆದ ಹಲವು ವರ್ಷಗಳಿಂದ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ. ಆ ಅನುಭವದಿಂದಲೇ ತಿಳಿದಿರುವುದೆಂದರೆ, ನಮ್ಮ ಸಮಾಜದ ಜನಸಂಖ್ಯೆ ಕನಿಷ್ಠ 12 ಲಕ್ಷಕ್ಕೂ ಅಧಿಕವಾಗಿದ್ದು, ಈ ಅಂಕಿಅಂಶಗಳನ್ನು ಕೇವಲ ತಲಾಸುಗಳು ಅಥವಾ ಕಾಗದದ ಮೇಲಿನ ಲೆಕ್ಕಾಚಾರದಿಂದ ನಿರ್ಧರಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.

ಮೇಲಿನ ಪೋಸ್ಟನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ..
ಅವರು ಮುಂದುವರೆದು ಮಾತನಾಡುತ್ತಾ, “ಈ ಸಮೀಕ್ಷೆ ಸುಮಾರು ಹತ್ತು ವರ್ಷಗಳ ಹಿಂದೆ ನಡೆಸಲ್ಪಟ್ಟಿದ್ದು, ಆ ಕಾಲಘಟ್ಟದ ಅನೇಕ ಅಂಶಗಳು ಈಗ ತೀವ್ರವಾಗಿ ಬದಲಾಗಿವೆ. ಆದ್ದರಿಂದ ಆ ಸಮೀಕ್ಷೆಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವುದು ಸರ್ವತಃ ತಪ್ಪು. ಈ ವರದಿ ಸಂಪೂರ್ಣವಾಗಿ ಅವೈಜ್ಞಾನಿಕ ಮತ್ತು ಅಪ್ರಾಯೋಗಿಕವಾಗಿದೆ. ಸರಿಯಾದ ಮಾಹಿತಿಯನ್ನು ಸಂಗ್ರಹಿಸದೆ ಸಮಾಜಗಳ ಬಗ್ಗೆ ಅಂಕಿಅಂಶಗಳನ್ನು ನಿರ್ಧರಿಸುವುದು ತೀವ್ರ ಅನ್ಯಾಯವಾಗಿದೆ,” ಎಂದು ಕಿಡಿಕಾರಿದರು.

ಬಾಗಲಕೋಟೆ, ಗಂಗಾವತಿ, ಬಳ್ಳಾರಿ, ಹಾಸನ, ತುಮಕೂರು, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುರಹಿನಶೆಟ್ಟಿ ಸಮುದಾಯದ ಜನಸಂಖ್ಯೆ ವ್ಯಾಪಕವಾಗಿ ಹರಡಿರುವುದನ್ನು ಹೈಲೈಟ್ ಮಾಡಿದ ಮಹಸ್ವಾಮಿಗಳು, “ನಮ್ಮ ಸಮಾಜವು ಹಿಂದುಳಿದ ಸಮಾಜಗಳಲ್ಲಿ ಒಂದಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿದ್ದು, ಈಗಲೂ ಅನೇಕ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸರಕಾರದ ವರದಿ ನಮ್ಮನ್ನು ಮತ್ತಷ್ಟು ಹಿಂಜರಿಯಿಸುತ್ತಿದೆ. ಇದು ಗಂಭೀರ ವಿಚಾರ” ಎಂದರು.
ಅವರ ಮಾತುಗಳ ಪ್ರಕಾರ, ಈ ವರದಿ ನಮ್ಮ ಸಮಾಜದ ನೈಜ ಚಿತ್ರಣವನ್ನು ಪ್ರತಿಬಿಂಬಿಸುತ್ತಿಲ್ಲ. ಸರಕಾರವು ನಿಖರ ಮತ್ತು ಸಮಗ್ರ ಸಮೀಕ್ಷೆ ನಡೆಸುವ ಮೂಲಕ ವರದಿ ತಿದ್ದುಪಡಿ ಮಾಡಬೇಕು. ನಾವು ಸರಕಾರವನ್ನು ಹಲವು ಬಾರಿ ಈ ಬಗ್ಗೆ ಮನವಿಗೊಂಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಮಾಜದ ಜನರ ಭಾವನೆಗಳನ್ನು ಎಣಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಬೇರೆ ದಾರಿಯಿಲ್ಲದೆ ನಾವು ನಮ್ಮ ಹಕ್ಕುಗಳಿಗಾಗಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಸಿದರು.

ಈ ಸುದ್ದಿಗೋಷ್ಠಿಗೆ ಸಮಾಜದ ಪ್ರಮುಖ ಮುಖಂಡರಾದ ನಿಂಗಪ್ಪ ಚೆಗೂರು, ರಘುನಾಥ ತುಕ್ಕಾ, ಮಲ್ಲಿಕಾರ್ಜುನ ಐಲಿ, ಮೈಲಾರಪ್ಪ ಅರಳಿ, ಪ್ರಭು ರೊಡ್ಡಾ ಹಾಗೂ ದೇವಿಂದ್ರಪ್ಪ ಗೊಟೂರ ಉಪಸ್ಥಿತರಿದ್ದರು.