ಗದಗ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ, ಬ್ಯಾನ್ ಆಗಿರೋ ಔಷಧಿಯಿಂದ ಚಿಕಿತ್ಸೆ ನೀಡಿದ್ದಕ್ಕೆ ಬಾಣಂತಿಯರ ಸಾವಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದೆ ರೀತಿ 100 ಕ್ಕೂ ಹೆಚ್ಚು ಬಾಣಂತಿಯರ ಸಾವು ಆಗಿದ್ದು, ರಿಂಗರ್ ಲ್ಯಾಕ್ಟೇಟ್ ಸೆಲ್ಯೂಷನ್ ಎಂಬ ಐವಿ ಫ್ಲ್ಯೂಟ್ ಔಷಧಿಯಿಂದ ಬಾಣಂತಿಯರ ಸಾವಾಗಿದೆ. ಸೆಪ್ಟೆಂಬರ್ 2023ರಲ್ಲಿ ಇದೇ ಸರ್ಕಾರ ಈ ಔಷಧಿ ಯೋಗ್ಯ ಅಲ್ಲ ಅಂತ ಬ್ಯಾನ್ ಮಾಡಿದೆ. ಬ್ಯಾನ್ ಆದ ಕಂಪನಿಯಿಂದ ಸರ್ಕಾರ ಔಷಧಿ ಖರೀದಿ ಮಾಡಿದ್ದು, ಆದರೂ ಅದೇ ಔಷಧಿಯನ್ನ ಸರ್ಕಾರ ಬಾಣಂತಿಯರಿಗೆ ನೀಡಿದೆ. ಆ ಕಾರಣಕ್ಕಾಗಿ ಬಾಣಂತಿಯರ ಸಾವಾಗಿದೆ ಎಂದು ರಾಮುಲು ಆರೋಪಿಸಿದರು.
ಬಳ್ಳಾರಿ ಸೇರಿ ರಾಜ್ಯದಲ್ಲಿ ಇದೇ ರೀತಿ ಸಾಕಷ್ಟು ಬಾಣಂತಿಯರ ಸಾವಾಗಿದ್ದು, ನಾನು ಎರಡು ಬಾರಿ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ ಈ ಬಗ್ಗೆ ನನಗೂ ಜ್ಞಾನ ಇದೆ. ಮೂರು ದಿನಗಳಲ್ಲಾದ ಸರಣಿ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾವುದೇ ಔಷಧ ಜನ್ರಿಗೆ ಕೊಡಬೇಕಾದ್ರೆ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ವೇರ್ ಹೌಸ್ ಇರುತ್ತೆ. ಅಲ್ಲಿ ಔಷಧೀಯ ಗುಣಮಟ್ಟದ ಟೆಸ್ಟ್ ಆಗುತ್ತೆ.ಆ ಟೆಸ್ಟ್ ಆದ್ಮೆಲೆ ಜನ್ರಿಗೆ ಕೊಡಬೇಕು. ಮಾರ್ಚ್ ತಿಂಗಳಿನಿಂದ ಇಲ್ಲಿವರೆಗೆ ಕೋಲಾರ, ಪಾವಗಡ, ತುಮಕೂರು ದಾವಣಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಬಾಣಂತಿಯರ ಸಾವಾಗಿದ್ದು, ಸದ್ಯ ಬಾಣಂತಿಯರ ಸಾವಿಗೆ ಕಾರಣ ಯಾರು ಅಂತ ಪ್ರಶ್ನಿಸಿದರು.
ಇಷ್ಟೊಂದು ದೊಡ್ಡ ಅನಾಹುತ ಆದ್ರೂ ನೂರು ಜನ ಸತ್ತ ಬಳಿಕ ಸಿಎಂ ಈಗ ಮಾತನಾಡಿದ್ದಾರೆ. ಹಾಗಾದ್ರೆ ನೂರು ಬಾಣಂತಿಯರ ಸಾವಿನ ಹೊಣೆ ಯಾರು ಅಂತ ಪ್ರಶ್ನಿಸಿದರು.
ಬಾಣಂತಿಯರ ಸಾವು, ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದ್ದು, ಸಿಎಂ, ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ದುರಂತ ಆಗಿದೆ.ಕಳಪೆ ಗುಣಮಟ್ಟದ ಔಷಧಿ ವಿತರಣೆ ತಕ್ಷಣ ನಿಲ್ಲಿಸಬೇಕು. ಬಾಣಂತಿಯರ ಸಾವು ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಅಂತ ಶ್ರೀರಾಮುಲು ಒತ್ತಾಯಿಸಿದರು.
ನಿವೃತ್ತ ನ್ಯಾಯಮೂರ್ತಿ, ಅಧಿಕಾರಿಗಳಿಂದ ತನಿಖೆ ಬೇಡ, ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು.ಸಿಬಿಐಗೆ ಕೊಟ್ರೆ ಎಲ್ಲರೂ ಜೈಲಿಗೆ ಹೋಗಬೇಕಾಗುತ್ತೆ. ಬಾಣಂತಿಯರ ಸಾವಿಗೆ ಕಾರಣವಾದ ಸರ್ಕಾರಕ್ಕೆ ನೈತಿಕತೆ ಇದ್ರೆ, ತಕ್ಷಣ ಆರೋಗ್ಯ ಸಚಿವರು ತಕ್ಷಣ ರಾಜಿನಾಮೆ ನೀಡಬೇಕು ಅಂತ ಒತ್ತಾಯಿಸಿದರು.
ಭವಿಷ್ಯದಲ್ಲಿಯೂ ಬಾಣಂತಿಯರ ಸಾವು ನಿಲ್ಲಬೇಕಾದ್ರೆ ಸಿಬಿಐ ತನಿಖೆಗೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಸಭೆ ಸಮಾಧಾನ ತಂದಿಲ್ಲ. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕಿತ್ತು. ಬಳ್ಳಾರಿ ಆಸ್ಪತ್ರೆಯಲ್ಲಿ ಏನ್ ನಡೆದಿದೆ ಎಲ್ಲವೂ ಗೊತ್ತಿದೆ, ಸರ್ಕಾರ ತನ್ನ ತಪ್ಪು ಮುಚ್ಚಿಡಲು ಬಾಣಂತಿಯರ ಸಾವಿಗೆ ಬೇರೆ ಕಾರಣ ನೀಡ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.