ಗದಗ: ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ನಿಜಕ್ಕೂ ಶ್ಲಾಘನೀಯ ಹೆಜ್ಜೆಯನ್ನು ಇಟ್ಟಿದ್ದಾರೆ.
ಮುಂಡರಗಿಯ ತರಕಾರಿ ಮಾರುಕಟ್ಟೆಗೆ ಆಕಸ್ಮಿಕ ಭೇಟಿ ನೀಡಿದ ವೇಳೆ, ಅಣ್ಣಿಗೇರಿ ಅವರು 14 ವರ್ಷದ ತನುಜಾ ಗೊಲ್ಲರ್ ಎಂಬ ವಿದ್ಯಾರ್ಥಿನಿ ಶಾಲೆಗೆ ತೆರಳದೇ ಮನೆಯಲ್ಲೇ ಇರುವುದನ್ನು ಗಮನಿಸಿದರು. ವಿಚಾರಿಸಿದಾಗ, ಆಕೆ ಏಳನೇ ತರಗತಿಯನ್ನು ಪೂರ್ಣಗೊಳಿಸಿದ ಬಳಿಕ ಎಂಟನೇ ತರಗತಿಗೆ ದಾಖಲಾಗದೇ ಶಾಲೆಯಿಂದ ಹೊರಗುಳಿದಿರುವುದು ತಿಳಿದುಬಂದಿತು.
ಈ ಸಂದರ್ಭ ಗಂಗಾಧರ ಅಣ್ಣಿಗೇರಿ ಅವರು ತಕ್ಷಣವೇ ವಿದ್ಯಾರ್ಥಿನಿಯ ಪಾಲಕರೊಂದಿಗೆ ಸಮಾಲೋಚನೆ ನಡೆಸಿ, “14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುತ್ತಿದೆ. ನಿಮ್ಮ ಮಗಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು” ಎಂದು ತಿಳುವಳಿಕೆ ನೀಡಿದರು.
ಅವರ ಮಾರ್ಗದರ್ಶನದಲ್ಲಿ ತನುಜಾ ಗೊಲ್ಲರ್ ಅವರನ್ನು ಪಟ್ಟಣದಲ್ಲಿರುವ ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆಗೆ ದಾಖಲಿಸುವ ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಆಕೆಗೆ ಅಗತ್ಯ ಪಠ್ಯಪುಸ್ತಕಗಳನ್ನು ನೀಡುವಂತೆ ಶಾಲಾ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಿಆರ್‌ಪಿ ಹೋಳೆಯಮ್ಮನವರ್, ಶಿಕ್ಷಕರಾದ ಕೋರಿ, ನಾಗಭೂಷಣ ಹಿರೇಮಠ ಸೇರಿದಂತೆ ಎಂ.ಎಸ್. ಡಂಬಳ ಪ್ರೌಢಶಾಲೆಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯ ಶಾಲಾ ಪ್ರವೇಶ ಕಾರ್ಯವನ್ನು ನೆರವೇರಿಸಿದ ಗಂಗಾಧರ ಅಣ್ಣಿಗೇರಿ ಅವರ ಸೇವಾ ಮನೋಭಾವವನ್ನು ಸ್ಥಳೀಯರು ಮೆಚ್ಚಿಕೊಂಡರು. ಇದೇ ಸಂದರ್ಭದಲ್ಲಿ “ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯೊಬ್ಬಳ ಜೀವನದಲ್ಲಿ ಬೆಳಕನ್ನು ತಂದಿರುವುದು ನಿಜಕ್ಕೂ ಅರ್ಥಪೂರ್ಣ ಆಚರಣೆ. ಇಂತಹ ಪ್ರೇರಣಾದಾಯಕ ಹೆಜ್ಜೆಗಳು ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಬದಲಾವಣೆಗೆ ಕಾರಣವಾಗುತ್ತವೆ” ಎಂದು ಪ್ರಶಂಸಿಸಿದರು.